ಪ್ರಥಮ ಚುಂಬನಂ ದಂತ ಭಗ್ನಂ ಎಂತಾದ ಪ್ರಥಮ ಉಡುಗೊರೆ


ಮದುವೆಯಾದ ಹೊಸತರಲ್ಲಿ ಪ್ರೀತಿಯ ಮಡದಿಗೆ ಏನಾದರೊಂದು ಉಡುಗೊರೆ ನೀಡಬೇಕೆಂದು ವಿಚಾರ ಮಾಡಿದೆ. ಆದರೆ ಉಡುಗೊರೆ ಯಾವುದನ್ನು ನೀಡುವುದು ಎನ್ನುವುದು ಮಾತ್ರ ತಲೆಗೆ ಸರಿಯಾಗಿ ಹೊಳೆಯಲೇ ಇಲ್ಲ. ಪರಿಚಯದವರನ್ನು ಕೇಳಿದರೆ ಎಲ್ಲರೂ ಒಂದೊಂದು ತರಹ ಹೇಳಿದರು. ಏನೂ ತೋಚದೆ ಕೊನೆಗೆ  'ಸೀರೆ'ಯನ್ನೇ ಕೊಡಬೇಕೆಂದು ನಿರ್ಧರಿಸಿದೆ. ಆದರೆ ಸೀರೆಗಳ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲದ ನನಗೆ ಎಂತಹ ಸೀರೆ? ಯಾವ ವಿನ್ಯಾಸದ ಸೀರೆ? ಖರೀದಿಸಬೇಕೆಂದು ತಿಳಿಯಲಿಲ್ಲ. ಆದರೆ ಎಲ್ಲ ತಿಳಿದವನಂತೆ ಸೀರೆಯಂಗಡಿಗೆ ಹೋದೆ. ಅಲ್ಲಿಟ್ಟಿದ್ದ ಎಲ್ಲ ಬಗೆ ಬಗೆಯ ವಿನ್ಯಾಸದ ಬಣ್ಣ-ಬಣ್ಣದ ಸೀರೆಗಳನ್ನು ನೋಡಿ ಮತ್ತಷ್ಟು ವಿಚಲಿತನಾದೆ. ಸೀರೆಯಂಗಡಿಯಲ್ಲಿ ಸೀರೆ ಖರೀದಿ ಮಾಡಲು ಬಂದವರಲ್ಲಿ ಪುರುಷನೆಂದರೆ ನಾನೊಬ್ಬನೇ. ಸಾವಕಾಶವಾಗಿ ಮೆಲ್ಲಗೆ ಹೆಜ್ಜೆಯನ್ನಿಡುತ್ತಾ ಅಂಗಡಿಯಲ್ಲಿದ್ದ ಸೀರೆ ತೋರಿಸುವ ಹುಡುಗನ ಹತ್ತಿರ ಹೋದೆ.  ಅಲ್ಲಿ ಅವನು ಸಾಕಷು ್ಟ ಸೀರೆಗಳನ್ನು ತೋರಿಸುತ್ತಾ ಹೋದ. ನನ್ನ ಸಂಕಟ ನನ್ನದು. ಫಜೀತಿ ಹೇಳತೀರದು. ಹುಡುಗಿ ನೋಡಿ ಸೆಲೆಕ್ಟ ಮಾಡುವಾಗಲೂ ನಾನು ಇಷ್ಟು ಒದ್ದಾಡಿರಲಿಲ್ಲ.  ಆದರೆ ಈಗ ಮಾತ್ರ ಸರಿಯಾಗಿ ಸಿಕ್ಕಿಬಿದ್ದೆ. ನಾನು ಯಾವತ್ತೂ ಮದುವೆಯ ಮುಂಚೆ ಯಾರಿಗೂ ಗಿಫ್ಟ್ ಕೊಟ್ಟಿರಲಿಲ್ಲ ಮತ್ತು ಕೊಡುವ ಪ್ರಮೇಯವೇ ಬರಲಿಲ್ಲ ಹಾಗೂ ಅಂತಹ ಸನ್ನಿವೇಶವನ್ನು ಸೃಷ್ಟಿಸಿಕೊಂಡಿರಲಿಲ್ಲ ಮಾರಾಯರ್ರೇ!. ಅದಕ್ಕೆ ಇಷ್ಟು ಫಜೀತಿಯಾಯಿತು ಎಂದು ಆಗಾಗ ನನ್ನಷ್ಟಕ್ಕೆ ನಾನೇ ಹೇಳಿಕೊಂಡು ನಕ್ಕಿದ್ದಿದೆ.   

ಯಾವುದನ್ನು ಖರೀದಿ ಮಾಡಬೇಕೆಂದು ಮಾತ್ರ ತೋಚಲಿಲ್ಲ. ಅಂತು ಇಂತು ಕೊನೆಗೆ  ಧೈರ್ಯ ಮಾಡಿ 'ಸ್ವದೇಶಿ' ಮೋಹಕ್ಕೆ ಒಳಗಾಗಿ ಕಾಟನ್ ಸೀರೆ ಕೊಡಿ ಎಂದೆ. ಅಂಗಡಿಯವನಿಗೂ ನನ್ನ ಸೀರೆಯ ಬಗೆಗಿನ 'ಬಂಡವಾಳ' ತಿಳಿದುಹೋಗಿತ್ತು. ಕೊನೆಗೆ ಆತನೇ ಒಂದು ಸೀರೆ ತೋರಿಸಿ - "ಸರ್, ಇದು ತುಂಬಾ ಚೆನ್ನಾಗಿದೆ . ನಿಮ್ಮ ಪತ್ನಿಗೆ ಹೇಳಿ ಮಾಡಸಿದ ಹಾಗಿದೆ. ಖಂಡಿತ ಅವರಿಗೆ ಇಷ್ಟವಾಗುತ್ತೆ ಇದನ್ನೇ ತೆಗೆದುಕೊಳ್ಳಿ ಎಂದು ಚೆನ್ನಾಗಿ ಮಸಾಲಿ ಹಾಕಿದ ಮಾತುಗಳನ್ನು ಹೇಳಿದ. ಕಾಗದದ ಬಾಕ್ಸ್ ತೆಗೆದು ಅದರಲ್ಲಿದ್ದ ಮಡಿಚಿಟ್ಟ ಸೀರೆಯನ್ನು ಮೆಲ್ಲನೆ ಹೊರತೆಗೆದು, ಸೀರೆಯ 'ದಡಿ' ಮಾತ್ರ ತೋರಿಸಿ ಪ್ಯಾಕ್ ಮಾಡಿ ಕೊಟ್ಟ. ಎನೋ ಮಹಾ ಸಾಧನೆ ಮಾಡಿದವನ ಹಾಗೆ ಜಂಭದ ಕೋಳಿಯಂತೆ ಮಡದಿಯ ಮುಂದೆ ಒಣ ಧಿಮಾಕು ತೋರಿಸಲು ತಯಾರಾಗಿ, ತವರಿನಲ್ಲಿದ್ದ ಹೆಂಡತಿಯ ಮನೆಗೆ ಏನೇನೋ ಕನಸು ಕಾಣುತ್ತಾ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆ. ಹೆಗಲಿಗೊಂದು ಬ್ಯಾಗು ಕೈಯಲ್ಲಿ ಪ್ರೀತಿಯ ಉಡುಗೊರೆಯ ಚೀಲವನ್ನು ಹಿಡಿದುಕೊಂಡು ಆದಷ್ಟು ಬೇಗ ಮನೆ ತಲುಬೇಕು.  ಮುದ್ದಾದ ಮಡದಿಗೆ  ಮಸ್ತಾದ "ಉಡುಗೊರೆ" ಕೊಡಬೇಕು. ಅವಳ ಕಡೆಯಿಂದ ಶಹಬ್ಬಾಷ್ ಅನಿಸಿಕೊಳ್ಳಬೇಕೆಂದು ಮನಸ್ಸಿನಲ್ಲಿಯೇ ಕನಸಿನ ಗೋಪುರ ಕಟ್ಟುತ್ತಾ ಬಂದೆ. ಮನೆಗೆ ಬರುವಷ್ಟರಲ್ಲಿ ಸಂಜೆ ಐದರ ಮಳೆ ಶುರುವಾಗಿತ್ತು . ಹಾಗೇ ತನು ಮನ ತೋಯಿಸಿಕೊಂಡು ಮನೆಯೊಳಗೆ ಹೆಜ್ಜೆಯಿಟ್ಟೆ. ಪ್ರೀತಿಯ ಮಡದಿಗೆ ಆಶ್ಚರ್ಯವೋ ಆಶ್ಚರ್ಯ!.  ಉಡುಗೊರೆ ನೀಡಿ ಇಂಪ್ರೆಸ್ ಮಾಡಿದೆ (ಎಂದು ಅಂದುಕೊಂಡೆ) . ಸೀರೆಯ ಪ್ಯಾಕ್ನ್ನು ಅವಳ ಕೈಯಲ್ಲಿಟ್ಟೆ. ಉಡುಗೊರೆ ತೆಗೆದುಕೊಂಡು ಒಳಗೋಡಿ ತಮ್ಮ ಕುಟುಂಬದವರಿಗೆ ಹೆಮ್ಮೆಯಿಂದ ತೋರಿಸಿ ಖುಷಿಯಿಂದ ಅದನ್ನು ಎಲ್ಲರೊಂದಿಗೆ ಪಡಸಾಲಿನಲ್ಲಿ ಕುಳಿತು ಬಿಚ್ಚತೊಡಗಿದರು. ಉಡುಗೊರೆಯ ಬಾಂಬ್  ಢಮ್ ಢಮ್ಮಾರ್ ಎನ್ನುತ್ತೋ? ಇಲ್ಲ  ಠುಸ್ ಆಗುತ್ತೋ ? ಎಂದುಕೊಳ್ಳುತ್ತಾ ಮನದಲ್ಲಿ ಉಡುಗೊರೆಯ ಬಾಂಬಿನ ಭಯದಿಂದ ಕುಳ್ಳಿತ್ತಿದ್ದ ನನಗೆ ಒಮ್ಮೆಲೆ ಸಿಡಿಲು ಬಡಿದಂತೆ ಆಯಿತು. ಮನೆಯವರೆಲ್ಲರ ಹಾಗೂ ಮಡದಿಯ ನಗುವಿನ ಬಾಂಬ್ ಕೇಳಿ ಒಣ ಧಿಮಾಕು  ಅಲ್ಲೇ ಅಡಗಿ ಹೋಗಿತ್ತು. 

ಆಗಿದ್ದಿಷ್ಟೇ, ನಾನು ಕೊಟ್ಟ ಆ ಉಡುಗೊರೆಯ ಸೀರೆ ಹಳೇ ಮಾದರಿಯ, ಜಾಳು ಜಾಳದ, ಬಣ್ಣ  ಮಾಸಿದ ಹಳೆಯ  ಸ್ಟಾಕ್ನಿದ್ದಾಗಿತ್ತು. ಅಷ್ಟೇ ಅಲ್ಲದೆ ಅವರೆಲ್ಲರೂ ನಗಲು ಪ್ರಮುಖ ಕಾರಣ ಹಳ್ಳಿಯ ಅಜ್ಜಿಯರು ಧರಿಸುವ ಓಲ್ಡ ಮಾಡೆಲ್ ಸೀರೆ ಅದಾಗಿತ್ತು. ಈ ನವಯುವತಿಗೆ ಹೇಗೆ ತಾನೇ ಇಂತಹ ಸೀರೆ ಇಷ್ಟವಾದೀತು! ಹೇಳಿ. ಅವಾಗಿನ ನನ್ನ ಪರಿಸ್ಥಿತಿ  ಪ್ರಥಮ ಚುಂಬನಂ ದಂತ ಭಗ್ನಂ ಎಂದಂತಾಯಿತು.  ಏಕೆಂದರೆ ಅದು ನನ್ನ ಮಡದಿಗೆ ಕೊಟ್ಟ ಪ್ರಪ್ರಥಮ ಉಡುಗೊರೆ ಅದಾಗಿತ್ತು. ಇಂದಿಗೂ ನಾನು ನನ್ನ ಮಡದಿಯು  ಸೀರೆ ಕೊಡಸಿ ಎಂದಾಕ್ಷಣ ಏನಾದರೊಂದು ನೆಪ ಹೇಳಿ ಪಲಾಯನ ಮಾಡುತ್ತಿರುತ್ತೇನೆ.