ಹಾಸ್ಯಕೂಟ ಮತ್ತು ಸಿದ್ದನಗೌಡ ಪಾಟೀಲರು


 ಹಾಸ್ಯಕೂಟ ಸಂಘಟನೆಯೊಂದಿಗೆ ಹಿರಿಯರಾದ ಡಾ.ಸಿದ್ದನಗೌಡ ಪಾಟೀಲ ಅವರ ಸಂಬಂಧ ತುಂಬ ಅನ್ಯೋನ್ಯವಾಗಿತ್ತು. ಅವರೇ ಹೇಳುವಂತೆ "ಹಾಸ್ಯಕೂಟದವರು ಏನಮಾಡ್ತಾರು ತಿಂಗಳಾ ಎಷ್ಟಂತ ನಗಸಾವ್ರು ಅಂತ ಮಾಡಿದ್ನಿ ಆದರ ಹೊಸಾ ಹೊಸಾ ವಿಷಯಗಳ ಮ್ಯಾಲ ಹಾಸ್ಯಾ ಇಟಗೊಂತ ನೀವು ಛುಲೋ ನಡಿಸಿಕೊಂಡ ಹೊಂಟೀರಿ ಹೋಗ್ರಿ ಎಂದು ಮನದುಂಬಿ ಹಾರೈಸಿದ ಮಾತು ಇನ್ನು ನನ್ನ ಕಿವಿಯಲ್ಲಿ ಗುನುಗನಿಸುತ್ತಿದೆ. ಹಾಸ್ಯಕೂಟ ಕಾರ್ಯಕ್ರಮಗಳಲ್ಲಿ ಪಾಟೀಲರು ವೇದಿಕೆ ಮೇಲಿದ್ರೆ  ಅದಕ್ಕೊಂದು ವಿಶೇಷ ಕಳೆ ಇರುತ್ತಿತ್ತು. ತಮ್ಮ ಜೀವನದಲ್ಲಿ ನಡೆದ ಹಾಸ್ಯ ಪ್ರಸಂಗಗಳನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳುತ್ತ ಜನರನ್ನು ನಗೆಗಡಲಲ್ಲಿ ತೇಲಿಸುವವರು. ಅಲ್ಲದೇ ಹಾಸ್ಯಕೂಟದ ಕಲಾವಿದರಾದ ಪ್ರೊ. ಜಿ.ಕೆ. ಕುಲಕರ್ಣಿ , ಜಿ. ಎಸ್ ಸೋನಾರ, ಎಂ.ಬಿ. ಹೊಸಳ್ಳಿ, ಅಶೋಕ ಮಳಗಲಿ, ಅರವಿಂದ ಹುನಗುಂದ ಎಲ್ಲ ಕಲಾವಿದರಿಗೂ ತಮ್ಮ ಪ್ರೋತ್ಸಾಹದ ನುಡಿಗಳಿಂದ ಹೊಸ ಚೈತನ್ಯ ತುಂಬುತ್ತಿದ್ದರು. ವಿಶೇಷವಾಗಿ ಪ್ರೋ. ಜಿ.ಕೆ.ಕುಲಕಣರ್ಿ ಹಾಗೂ ಮಹಿಳೆಯರಲ್ಲಿ ಶ್ರೀಮತಿ ರಾಜೇಶ್ವರಿ ಹಿರೇಮಠ ಅವರ ನಗೆಮಾತುಗಳನ್ನು ತುಂಬ ಮೆಚ್ಚಿಕೊಂಡಿದ್ದರು.

ಪ್ರತಿ ತಿಂಗಳು ಎರಡನೇ ಶನಿವಾರದಂದು ಕನ್ನಡ ಸಾಹಿತ್ಯ ಭವನದಲ್ಲಿ ಹಾಸ್ಯಕೂಟ ಕಾರ್ಯಕ್ರಮವಿರುತ್ತಿತ್ತು. ನಾನು ಡಾ. ಸಿದ್ದನಗೌಡ ಪಾಟೀಲರಿಗೆ ಪೋನ ಮಾಡಿ ನೆನಪಿಸುತ್ತಿದ್ದೆ. ನಾನು ಹೇಳುವ ಮೊದಲೇ ಅವರು "ಗುಂಡೇನಟ್ಟಿ ನಂಗ ನೆಂಪ ಐತಿ ಬತರ್ೇನ ಹಾಸ್ಯಕೂಟ ಕಾರ್ಯಕ್ರಮಕ್ಕ ತಪ್ಸೂದುಲ್ಲ ಬರ್ತೆನ!" ಎಂದು ಹೇಳಿಬಿಡುತ್ತಿದ್ದರು. ಅಂದರೆ ಅವರ ನೆನಪಿನ ಶಕ್ತಿ ಕುಂದಿರಲಿಲ್ಲ. ನೂರೆಂಟು ಕೆಲಸಗಳನ್ನು ಅವರು ಹೊಂದಿದ್ದರೂ ಕೂಡ ಹಾಸ್ಯಕೂಟ ಕಾರ್ಯಕ್ರಮಕ್ಕೆ ತಪ್ಪದೇ ಬರುತ್ತಿದ್ದರು. ಕೆಲವೊಂದು ಬಾರಿ "ಗೌಡ್ರ  ನೀವು ಈ ತಿಂಗಳ ಹಾಸ್ಯಕೂಟ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಬೇಕು" ಎಂದು ಕೇಳಿಕೊಂಡಾಗ ಅವರು "ನಾನು ಅಧ್ಯಕ್ಷ ಮಾಡಿದ್ರೂ  ಬತರ್ೇನ ಇಲ್ಲದಿದ್ದರೂ ಬರ್ತೆನ ಕಾಳಜಿ  ಮಾಡಬ್ಯಾಡ್ರಿ ಎಂದು ಹೇಳುತ್ತಿದ್ದರು. ಅದರಂತೆ ತಪ್ಪದೇ ಕಾರ್ಯಕ್ರಮದಲ್ಲಿ ಅವರ ಉಪಸ್ತಿತಿ ಇರುತ್ತಿತ್ತು. ಅಷ್ಟೊಂದು ಅವರು ಹಾಸ್ಯಕೂಟದ ಅನ್ಯೋನ್ಯ ಸಂಬಂಧ ಹೊಂದಿದ್ದರು.

ಪ್ರತಿ ತಿಂಗಳೂ ಎರಡನೇ ಶನಿವಾರ ಸರಿಯಾದ ಸಮಯಕ್ಕೆ ಸಿದ್ದನಗೌಡರ ಕಾರು ಬಂದು ನಿಲ್ಲುತ್ತಿತ್ತು. ನಾನೇ  ಓಡಿ ಹೋಗಿ ಸಿದ್ದನಗೌಡರ ಕೈ ಹಿಡಿದು ಸಭಾಭವನಕ್ಕೆ ಕರೆದುಕೊಂಡು ಬರುತ್ತಿದ್ದೆ. ಅವರ ಜೊತೆಯಲ್ಲಿ  ಒಬ್ಬರು ಕೈಹಿಡಿದುಕೊಂಡು ಕರೆದುಕೊಂಡು ಬರಲು ಇರುತ್ತಿದ್ದರು. ಆದರೆ ಅವರನ್ನು ಬಿಡಿಸಿ ನನಗೆ ಅವರ ಕೈ ಹಿಡಿದುಕೊಂಡು ಒಳ ಕರೆದುಕೊಂಡು ಬರಲು ಸಂತೋಷವೆನಿಸುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾದೊಡನೆ ಅವರನ್ನು ವೇದಿಕೆಗೆ ಕೈಹಿಡಿದು ಹತ್ತಿಸುತ್ತಿದ್ದೆ. ಇತ್ತಿತ್ತಲಾಗಿ ಅವರು ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ನಂತರ ವೇದಿಕೆಯನ್ನೇರಲು ಬೇಡವೆನ್ನುತ್ತಿದ್ದರು. ನಾನು "ಗೌಡರೇ ಹಿರಿಯರಾದ ನಿಮ್ಮನ್ನು ಕೆಳಗೆ ಕೂಡಿಸಿ ನಾವು ವೇದಿಕೆ ಮೇಲೆ  ಕೂಡಲು ಮನಸ್ಸಿಗೆ ಬೇಸರವೆನಿಸುತ್ತದೆ." ಎಂದಾಗ  ಮಾತನ್ನು ಮುರಿಯಲಾರದೇ ವೇದಿಕೆ ಮೇಲೆ ಬಂದು ಕೂಡುತ್ತಿದ್ದರು. ಅವರು ಮಾತನಾಡಿದ ಮಾತುಗಳು ಕಿವಿಯಲ್ಲಿ ಧ್ವನಿ ಮುದ್ರಿತಗೊಂಡಂತಾಗಿವೆ. ಆದ್ದರಿಂದ ಅವರು ಮಾತನಾಡುತ್ತಿದ್ದ ಶೈಲಿಯಲ್ಲಿಯೇ ಬರೆದಿದ್ದೇನೆ.

ಪ್ರತಿ ತಿಂಗಳೂ ತಪ್ಪದೇ  ಡಾ. ಸಿದ್ದನಗೌಡ ಪಾಟೀಲ ಅವರು ಬರುತ್ತಿದ್ದರು. ವಿಷಯಕ್ಕೆ ತಕ್ಕಂತಹ ತಮ್ಮ ಜೀವನದಲ್ಲಿ ಕಂಡಂತಹ, ನೋಡಿದಂತ ಪ್ರಸಂಗಗಳನ್ನು ಹಂಚಿಕೊಂಡು ನಗಿಸುತ್ತಿದ್ದರು. ಒಂದು ತಿಂಗಳು "ನಾಟಕಗಳಲ್ಲಿ ಹಾಸ್ಯ ಎಂಬ ವಿಷಯದ ಕುರಿತಂತೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದನಗೌಡರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು "ನಾನು ಬೇರೆ ಬೇರೆ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಎಂದೂ ತಂಬಾಕು ತಿನ್ನದ ನಾನು ತಂಬಾಕು ತಿಂದಂತೆ ನಟಿಸಿ ಕೆಮ್ಮುವ ದೃಶ್ಯವೊಂದಿತ್ತು. ಅವಸರದಲ್ಲಿ ನಿಜವಾಗಲೂ ತಂಬಾಕು ತಿಂದು ಕೆಮ್ಮಿ ಕೆಮ್ಮಿ ಅಲ್ಲಿಯೇ ಉರುಳಿ ಬಿದ್ದಿದ್ದೆ. ನನ್ನ ಅಭಿನಯವನ್ನು ಅತಿಥಿಯಾಗಿ ಬಂದಿದ್ದ ಸಾಹಿತಿ ಎನ್ಕೆಯವರು ನೈಜ ಅಭಿನಯ ಎಂದು ಕೊಂಡಾಡಿದ್ದರು" ಎಂದು ತಮ್ಮ ನಾಟಕದ ಅನುಭವವನ್ನು ಹಂಚಿಕೊಂಡು ನಗೆಯಲೆ ಎಬ್ಬಿಸಿದ್ದರು. ಅದರಂತೆ 'ವಿದೇಶ ವಿನೋದ' ಎಂಬ ವಿಷಯದ ಮೇಲೊಮ್ಮೆ  ಹಾಸ್ಯ ಕಾರ್ಯಕ್ರಮವೊಂದನ್ನು ಇಟ್ಟುಕೊಂಡಾಗ ಡಾ. ಸಿದ್ದನಗೌಡ ಪಾಟೀಲ ಅವರು ಸಿಂಗಾಪೂರ, ಮಲೇಶಿಯಾ ದೇಶಗಳಿಗೆ ಅವರು ಪ್ರವಾಸ ಮಾಡಿದ ನೆನಪುಗಳನ್ನು ಹಂಚಿಕೊಳ್ಳುತ್ತ ವಿಮಾನದಲ್ಲಿ ಗಗನಸಖಿಯ ಕೈಯನ್ನು ಹಿಡಿದ ಪ್ರಸಂಗವನ್ನು ಹಾಸ್ಯಲೇಪನ ಹಚ್ಚಿ ಮಾತನಾಡಿದ ಅವರು ಜನರು ಬಿದ್ದು ಬಿದ್ದು ನಗುವಂತೆ ಮಾಡಿ ಕಾರ್ಯಕ್ರಮದ ಯಶಸ್ವಿಗೆ  ಕಾರಣರಾಗಿದ್ದರು.

ಇಂಥ ಲವಲವಿಕೆಯ ಚೇತನಮೂತರ್ಿಯಾಗಿದ್ದ ಡಾ. ಸಿದ್ದನಗೌಡ ಪಾಟೀಲ ಅವರು ಆಗಸ್ಟ್  ದಿ. 26 ಬುಧವಾರದಂದು ನಮ್ಮನ್ನಗಲಿದರು. ಅವರ ಅಗಲಿಕೆ ಸಮಸ್ತ ಕನ್ನಡ ಸಾರಸ್ವತ ಲೋಕಕ್ಕೆ ನೋವನ್ನುಂಟು ಮಾಡಿದೆ. ಈ ನುಡಿನಮನದೊಂದಿಗೆ ಹಿರಿಯ ಜೀವಿಗೆ  ಶ್ರದ್ಧಾಂಜಲಿಯನು ಅರ್ಪ ಸುತ್ತಲಿರುವೆ.