ಸುತ್ತಲೂ ಪರಿಮಳ ಸೂಸುವ ಮಲ್ಲಿಗೆ ದಂಡೆ

-ನಾಗೇಶ್ ಜೆ. ನಾಯಕ 

ಸವದತ್ತಿ

ಹನಿಗವಿತೆಗಳು ಇಂದು ಜನಪ್ರೀಯ ಸಾಹಿತ್ಯ ಪ್ರಕಾರಗಳಲ್ಲಿ ಒಂದೆನಿಸಿದೆ. ಪ್ರಮುಖ ಪತ್ರಿಕೆಗಳ ಪುಟಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಲೇ ಓದುಗರ ಮೊಗದಲ್ಲಿ ನಗೆಯನ್ನು ಅರಳಿಸುವುದರ ಜೊತೆಗೆ, ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ, ವಾಸ್ತವತೆಯ ವ್ಯಂಗ್ಯವನ್ನು ಚಾಟಿ ಏಟಿನೊಂದಿಗೆ ತಿವಿಯುತ್ತ, ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸವನ್ನು ಹನಿಗವಿತೆ ಮಾಡುತ್ತಿದೆ. ಕಿತ್ತೂರಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಸಂಜೀವ ಲದ್ದಿಮಠ ಅವರು 'ಮಲ್ಲಿಗೆ ದಂಡೆ' ಎಂಬ 220 ಚುಟುಕುಗಳ ಸಂಕಲನವನ್ನು ಹೊರತಂದಿದ್ದಾರೆ. ಈಗಾಗಲೇ ಅವರ 'ಮುತ್ತಿನ ಹಾರ' ಎಂಬ ಆಧುನಿಕ ವಚನಗಳ ಸಂಕಲನ ಹಾಗೂ 'ಹೃದಯ ದೀಪ' ಎಂಬ ಕವನ ಸಂಕಲನ ಪ್ರಕಟಗೊಂಡಿವೆ. ಪ್ರಸ್ತುತ ಚುಟುಕು ಸಂಕಲನದಲ್ಲಿ ವಿಷಯಗಳ ವೈವಿಧ್ಯತೆ ಕಂಡು ಬರುತ್ತದೆ. ಸಾಂಸಾರಿಕ, ಸಾಮಾಜಿಕ, ರಾಜಕೀಯ ವಿಷಯಗಳ ಜೊತೆಗೆ ಪ್ರೀತಿ-ಪ್ರೇಮ, ಪುಸ್ತಕ ಪ್ರೀತಿ, ಮೊಬೈಲು, ಬದುಕಿನ ಅನೂಹ್ಯ ಅರ್ಥಗಳನ್ನು ಬಿಂಬಿಸುವ ಚುಟುಕುಗಳು ಓದುಗರ ಗಮನ ಸೆಳೆಯುತ್ತವೆ. ಸ್ಪಷ್ಟವಾದ ಕಾವ್ಯಪ್ರಜ್ಞೆಯ ಜೊತೆಗೆ ಅಲ್ಲಲ್ಲಿ ಬಂಡಾಯದ ಧ್ವನಿ ಇಣುಕುತ್ತದೆ. ನಮ್ಮ ಸಮಾಜ ಸಂಪ್ರದಾಯದ ಹೆಸರಲ್ಲಿ ನಡೆಸುವ ಕೆಲ ತಪ್ಪುಗಳನ್ನು ಕವಿ ಕುಟುಕುವ ಕೆಲಸ ಮಾಡಿದ್ದಾರೆ.

ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಹೇಳುವಂತೆ "ಅನ್ನ ಬೆಂದಿದೆಯೇ ಎಂದು ತಿಳಿಯಲು ಒಂದು ಅಗುಳು ಹಿಚುಕಿದರೆ ಸಾಕಾಗುತ್ತದೆ. ಲದ್ದಿಮಠ ಅವರ ಈ ಸಂಕಲನದ ಕೆಲ ಚುಟುಕುಗಳೇ ಸಾಕು ಅವರ ಕಾವ್ಯದ ಬೆಲೆ ಕಟ್ಟಲು, ಎಲ್ಲವನ್ನೂ ಉದಾಹರಿಸಬೇಕಿಲ್ಲ. 220 ಮಲ್ಲಿಗೆ ಹೂಗಳ ಒಂದು ದಂಡಿಗೆಯನ್ನು ಹೆಣೆದು ಕನ್ನಡ ಸಾಹಿತ್ಯ ಸರಸ್ವತಿಗೆ ತೊಡಿಸ ಹೊರಟಿದ್ದಾರೆ". ನಿಸರ್ಗದ ಎಷ್ಟೆಲ್ಲ ಸಂಗತಿಗಳು ಹೊಂದಾಣಿಕೆಯಿಂದ ಮನುಷ್ಯ ಕುಲಕ್ಕೆ ಒಳಿತನ್ನುಂಟುಮಾಡುತ್ತಿವೆ. ದಿನಕರ ದೇಸಾಯಿಯವರು ತಮ್ಮ ಒಂದು ಚುಟುಕಿನಲ್ಲಿ ಹೇಳುವಂತೆ, 'ಕಟ್ಟಡವಿಯಲ್ಲಿಯೂ ಬಾಂಧವ್ಯ ನೀತಿ. ಪಟ್ಟಣದೊಳಿಲ್ಲೇಕೆ ಈ ತರದ ಪ್ರೀತಿ' ಕೂಡಿ ಬಾಳುವುದರ ಮರ್ಮವನ್ನು ಕಾಡಿನ ಮರ, ಗಿಡ, ಬಳ್ಳಿಗಳ ಪ್ರತಿಮೆಗಳ ಮೂಲಕ ಕಟ್ಟಿಕೊಡುತ್ತಾರೆ ಕವಿ. ಇಂದಿನ ವಿಷಮ ಸನ್ನಿವೇಶದಲ್ಲಿ ಮನೆ ಮನೆಗಳ ನಡುವೆ, ಮನಸು ಮನಸುಗಳ ನಡುವೆ ಗೋಡೆಗಳೆದ್ದು ಮಾನವೀಯ ಸಂಬಂಧಗಳು ಬಿರುಕು ಬಿಡುತ್ತಿವೆ. ನಾನೆಂಬ ಅಹಮಿಕೆ ಮನುಷ್ಯನನ್ನು ಸಣ್ಣವನನ್ನಾಗಿಸುತ್ತದೆ. ಇಂತಹ ಸಂದರ್ಭದಲ್ಲಿ ಕವಿ 'ಒಗ್ಗಟ್ಟು' ಎನ್ನುವ ಚುಟುಕಿನ ಮೂಲಕ ಕೂಡಿ ಬದುಕುವ ಅನಿವಾರ್ಯತೆಯನ್ನು ಸಾರಿ ಹೇಳುತ್ತಾನೆ.

ನನ್ನಿಂದಲೇ ಲೋಕ ಎಂದಿತು ಗಾಳಿ ಸುಳಿದಾಡಿ

ನನ್ನಿಂದಲೇ ಬದುಕು ಎಂದಿತು ಬೆಂಕಿ ಉರಿದಾಡಿ

ನನ್ನಿಂದಲೇ ಉಸಿರು ಎಂದಿತು ನೀರು ಹರಿದಾಡಿ

ನನ್ನಿಂದಲೇ ಬಾಳು ಎಂದಿತು ಮಣ್ಣು ಹಾರಾಡಿ

ನನ್ನಿಂದಲೇ ಸೃಷ್ಟಿ ಎಂದಿತು ಆಕಾಶ ಧ್ವನಿ ಮಾಡಿ

ಪಂಚಭೂತಗಳೆಲ್ಲ ಒಂದಾದವು ಒಪ್ಪಂದದಡಿ

ಆಧುನಿಕ ವಚನದಂತೆ ಭಾಸವಾಗುವ ಚುಟುಕು ಸರಳವಾಗಿ ಓದಿಸಿಕೊಳ್ಳುತ್ತಾ ಗಮನ ಸೆಳೆಯುತ್ತದೆ. ಪುರಾಣ, ಮಹಾಕಾವ್ಯಗಳಲ್ಲಿ ಹೆಣ್ಣನ್ನು ಶೋಷಣೆಯ ಮೂಲವಾಗಿ ಬಳಸಿಕೊಂಡಿದ್ದನ್ನು ನಾವು ಗಮನಿಸಿದ್ದೇವೆ. ಆದರೆ ಆಧುನಿ ಮಹಿಳೆ ಹಾಗಲ್ಲ. ಆಕೆ ಎಲ್ಲವನ್ನೂ ಸಹಿಸಿಕೊಂಡು ಕೂರುವುದಿಲ್ಲ. ಪ್ರತಿಭಟನೆಯ ಅಸ್ತ್ರ ಆಕೆಯ ಬಳಿಯಿದೆ. ಅಷ್ಟು ಸುಲಭವಾಗಿ ಆಕೆಯನ್ನು ಬಲಿಪಶು ಮಾಡಲು ಆಗದು ಎಂಬ ಅರ್ಥ ಕೊಡುವ ಹನಿ ಗಮನಿಸಿ.

ನಾನು ಸೀತೆಯಲ್ಲ, ಸಾವಿತ್ರಿಯಲ್ಲ ಅತ್ತೆ

ಕಾಡಿಸಬೇಡಿ ನನ್ನ ಮತ್ತೆ ಮತ್ತೆ

ನಾನು ಕಿರಣ್ಬೇಡಿ 

ತೊಡಿಸುವೆನು ಬೇಡಿ (ಛಲ)

ಬೇಂದ್ರೆ ಸಮರಸವೇ ಜೀವನ ಎಂದರು. ಬದುಕೆಂಬ ಸಂಸಾರದ ಬಂಡಿ ಸುಗಮವಾಗಿ ಸಾಗಬೇಕಾದರೆ ಪ್ರೀತಿ-ವಿಶ್ವಾಸ, ನಂಬಿಕೆ ಅಗತ್ಯವಾಗಿ ಬೇಕೇ ಬೇಕು. ಆದರೆ ಇಂದು ಕುಟುಂಬಗಳು ನೂರೆಂಟು ಕಾರಣಗಳಿಂದ ವಿಘಟನೆಗೊಳ್ಳುತ್ತಿವೆ. ಸಸಾರವಾಗಬೇಕಾದ ಸಂಸಾರ ದುಸ್ಸಾರವಾಗುತ್ತಿದೆ. ತುಂಬು ದೋಣಿ ತಳಕಚ್ಚಲು ಹೇಗೆ ಸಣ್ಣ ರಂಧ್ರವೊಂದು ಕಾರಣವಾಗುತ್ತದೋ, ಹಾಗೆಯೇ ಸಂಸಾರವೆಂಬ ನೌಕೆ ಅಪನಂಬುಗೆ, ಅವಿಶ್ವಾಸದಿಂದ ತಳ ಕಚ್ಚುತ್ತಿದೆ ಎನ್ನುವುದನ್ನು ಸೂಚ್ಯವಾಗಿ ಕವಿ 'ಸಂ-ಸಾರು' ಎನ್ನುವ ಹನಿಯಲ್ಲಿ ಹೇಳುತ್ತಾರೆ.

ಉಪ್ಪು-ಖಾರಗಳಲ್ಲಿ ವ್ಯತ್ಯಾಸವಾದರೆ

ಕೆಡಬಲ್ಲದು 'ಸಾರು'

ಪ್ರೀತಿ-ವಿಶ್ವಾಸಗಳಲ್ಲಿ ವ್ಯತ್ಯಾಸವಾದರೆ

ಕೆಡಬಲ್ಲದು ಸಂಸಾರು

ಸಮಾಜ ಯಾವತ್ತಿಗೂ ಹಾಗೆಯೇ. ಹೆಣ್ಣಿಗೊಂದು ನಿಯಮ, ಗಂಡಿಗೊಂದು ನಿಯಮ ನಿಮರ್ಿಸಿ ಮಲತಾಯಿ ಧೋರಣೆ ತೋರುತ್ತದೆ. ಸಮಾಜದ ಬಿಗ್ಗಬಿಗಿ ಸಂಪ್ರದಾಯಗಳೆಲ್ಲ ಹೆಣ್ಣಿನ ಮೇಲೆಯೇ ಹೇರಲ್ಪಟ್ಟು ಗಂಡಸಿಗೆ ರಿಯಾಯಿತಿ ನೀಡಿವೆ. ಹೆಣ್ಣಿಗೆ ಏನೆಲ್ಲಾ ಗೌರವ, ಮಯರ್ಾದೆಯನ್ನು ನೀಡಿದರೂ ಆಕೆಗೆ ಸಿಗಬೇಕಾದ ಸ್ಥಾನಮಾನ ಮರೀಚಿಕೆಯಾಗಿಯೇ ಉಳಿದಿದೆ. ಅದಕ್ಕೆಂದೇ ಕವಿ 'ಸಂಪ್ರದಾಯ' ಎನ್ನುವ ಹನಿಯ ಮೂಲಕ ಹೀಗೆ ಚುಚ್ಚುತ್ತಾನೆ.

ಅಣ್ಣ ಸತ್ತರೆ ಅತ್ತಿಗೆ

ದಿಕ್ಕಿಲ್ಲದೆ ನರಳುವಳು ಹೊತ್ತು ಹೊತ್ತಿಗೆ

ಅತ್ತಿಗೆ ಸತ್ತರೆ

ಮರುಹೊತ್ತಿಗೆ ಬರುವಳು ಹೊಸ ಅತ್ತಿಗೆ

ಗಂಡ ಸತ್ತರೆ ಹೆಂಡತಿ ಆಗುತ್ತಾಳೆ ವಿಧವೆ/ ಹೆಂಡತಿ ಸತ್ತರೆ ಗಂಡ ಆಗುತ್ತಾನೆ ಮರುಮದುವೆ ಎಂದು ಡುಂಡಿರಾಜರು ಬಹು ಹಿಂದೆಯೇ ಬರೆದದ್ದನ್ನು ನೆನಪಿಸುತ್ತದೆ ಚುಟುಕು. ಆಚರಣೆಗಳೆಲ್ಲ ವ್ಯರ್ಥವಾಗಿ, ಆದರ್ಶಗಳೆಲ್ಲ ಕಣ್ಮರೆಯಾಗುತ್ತಿರುವುದ ಕಂಡು ಕವಿಗೆ ಕೊರಗಿದೆ. ವರ್ಷದುದ್ದಕ್ಕೂ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಗಳನ್ನು ಅದ್ದೂರಿಯಿಂದ ಆಚರಿಸುತ್ತ ಬರುವ ನಾವುಗಳು, ಅವರ ಆದರ್ಶಗಳನ್ನು ಆಚರಣೆಗೆ ತರುವ ವಿಚಾರ ಬಂದರೆ ಸೋಲುತ್ತೇವೆ. ಮೂತರ್ಿಗಳು ಮಾತ್ರ ವಿಜೃಂಭಿಸಿ ವ್ಯಕ್ತಿಯ ತತ್ವಾದರ್ಶಗಳು ಮಣ್ಣುಪಾಲಾಗುತ್ತಿರುವುದನ್ನು ಕವಿ ಹೀಗೆ ಹೇಳುತ್ತಾರೆ.

ಬುದ್ಧ-ಬಸವರ ಹೆಸರಿನಲ್ಲಿ

ಜನ ಧರ್ಮಕ್ಕೆ ಬದ್ಧರಾಗಿ ಕುಂತರು

ಮೂತರ್ಿಗಾಗಿ ಕೀತರ್ಿಗಾಗಿ

'ಜೈ' ಎಂದು ಬಿದ್ದರು

ಆಚರಣೆ ಪಾಲಿಸುವ ದಾರಿಯಲ್ಲಿ

ಜಾರಿ ಜಾರಿ ಬಿದ್ದರು (ಆಚರಣೆ)

ಪರೀಕ್ಷೆಯಲ್ಲಿ ಯಾವಾಗಲೂ/ಹುಡುಗಿಯರೇ ಮುಂದೆ/ ಕಾರಣ.../ ಹುಡುಗರು ಯಾವಾಗಲೂ ಅವರ ಹಿಂದೆ ಎನ್ನುವ ಡುಂಡಿರಾಜರ ಹನಿ ಮೊಗದಲ್ಲಿ ನಗೆ ಅರಳಿಸುತ್ತದೆ. ತನ್ನ ಹಿಂದೆ ಬಿದ್ದ ಹುಡುಗನ ಕುರಿತು ಗೆಳತಿ ಕೇಳಿದ ಪ್ರಶ್ನೆಗೆ ಹುಡುಗಿ ನೀಡುವ ಹಾರಿಕೆಯ ಉತ್ತರ ಹೇಗಿದೆ ನೋಡಿ....

ಹುಡುಗಿಯನ್ನು ಗೆಳತಿ ಕೇಳಿದಳು

'ಸದಾಕಾಲ ನಿನ್ನ ಹಿಂದೆಯೇ 

ಸುತ್ತುತ್ತಾ ಇರುತ್ತಾನಲ್ಲ ಯಾರವನು?'

'ಆತ ನನ್ನ ಫ್ಯಾನು

ಕಂಪನಿ ಯಾವುದೋ ಗೊತ್ತಿಲ್ಲ

ಹೀಗೆ ತಮಾಷೆಯಾಗಿ ಚುಟುಕುಗಳನ್ನು ಕಟ್ಟಿಕೊಡುವ ಸಂಜೀವ ಲದ್ದಿಮಠ, ತಮ್ಮ ಪದಗಳ ಪ್ರಯೋಗದಿಂದ ಚುರುಕು ಮುಟ್ಟಿಸುತ್ತಾರೆ. ಚಿಂತನೆಗೆ ತೊಡಗಿಸುತ್ತಾರೆ. ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾರೆ. ಅಲ್ಲಲ್ಲಿ ಕಚಗುಳಿ ಇಡುವಂತೆ ಮಾಡುತ್ತಾರೆ. 'ಮಾನವೀಯತೆಯ ಮಾಳಿಗೆ ಸೋರುತಿಹುದು' ಎಂದು ವಿಷಾದ ವ್ಯಕ್ತಪಡಿಸುತ್ತಾರೆ. 'ಪದಕ್ಕೆ ಪದ ಹದವಾಗಿ ಬೆರೆತರೆ ಕಾವ್ಯಕ್ಕೆ ಮೂಡುವುದು ಅರ್ಥ ಎಂದು ತಮಗೆ ತಾವೇ ಹೇಳಿಕೊಳ್ಳುವುದರ ಮೂಲಕ ಭರವಸೆ ಹುಟ್ಟಿಸುತ್ತಾರೆ. ಶಾಸ್ತ್ರಿ ಅವರು ಗುರುತಿಸಿದಂತೆ ಕೆಲವು ಚುಟುಕುಗಳು ವಾಚ್ಯವೆನಿಸಿದರೂ ಸಹಜವಾಗಿ ಬಳಸಿದ ಪ್ರಾಸ, ದುಡಿಸಿಕೊಂಡ ಪ್ರತಿಮೆ, ರೂಪಕಗಳ ಮೂಲಕ ಓದುಗರಿಗೆ ಇಷ್ಟವಾಗುತ್ತಾರೆ. ಮತ್ತಷ್ಟು ಹೊಸ ಹನಿಗವಿತೆಗಳ ಮೂಲಕ ಓದುಗರಿಗೆ ಮುಖಾಮುಖಿಯಾಗಲಿ ಎಂದು ಹಾರೈಸುತ್ತ, ಅವರ ಸಂಕಲನಕ್ಕೆ ಶುಭ ಕೋರುತ್ತೇನೆ.