ಸಾರಂಗಿ ಸಂತ ಉಸ್ತಾದ್ ಫಯಾಜ್ ಖಾನ್ (ಲೇಖನ)

ಲೋಕದರ್ಶನ ವರದಿ 

(ಜೂನ್ 2, 2024 ರವಿವಾರ ಭಾರತೀಯ ಸಂಗೀತ ವಿದ್ಯಾಲಯ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯಗಳ ವೇದಿಕೆಯಿಂದ ಕೃಷ್ಣ ಹಾನಗಲ್ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದಲ್ಲಿ ನೀಡಿ ಗೌರವಿಸಲಾಗುತ್ತಿದೆ. ತನ್ನ ನಿಮಿತ್ತ ಅವರ ಜೀವನ ಸಾಧನೆಗಳ ಪರಿಚಯ ಲೇಖನ) 

ಸಾರಂಗಿ ವಾದನದಲ್ಲಿ ಅದೇನೋ ದೈವಿಕಶಕ್ತಿಯಿದೆ. ಅದಕ್ಕೆ ಸಹೃದಯರ ಹೃದಯ ತಂತಿಯನ್ನು ಮೀಟವ ಸಾಮರ್ಥ್ಯವಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಾದ್ಯಗಳಲ್ಲೊಂದಾದ ಸಾರಂಗಿ ವಾದ್ಯವನ್ನು ತಪಸ್ಸಿನಂತೆ ಸ್ವೀಕರಿಸಿ, ಸಾಧನೆಯ ಹಾದಿಯಲ್ಲಿ ಸಾಗಿ ಸಾರಂಗಿ ವಾದ್ಯದ ಮುಖಾಂತರ ಪ್ರಖ್ಯಾತರಾದವರು ಉಸ್ತಾದ್ ಫಯಾಜ್‌ಖಾನ್‌ರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ದಾಸವಾಣಿ, ವಚನವಾಣಿ, ಧಾರಾವಾಹಿ ಶೀರ್ಷಿಕೆ ಗೀತೆ, ಸಿನಿಮಾ ಹಿನ್ನೆಲೆ ಸಂಗೀತದಲ್ಲೂ ಅವರು ಗುರುತಿಸಿಕೋಂಡಿದ್ದಾರೆ. 

ಉಸ್ತಾದ್ ಫಯಾಜ್‌ಖಾನ್ ಸಾರಂಗಿ ಅವರು ಅಪರೂಪದ ಸಾರಂಗಿ ಕುಟುಂಬದ ಕುಡಿ. ಕಳೆದ ಒಂಭತ್ತು ತಲೆಮಾರುಗಳಿಂದ ಸಾರಂಗಿ ನುಡಿಸುತ್ತಿರುವ ಈ ಕುಟುಂಬ ಸದಸ್ಯರು ಐತಿಹಾಸಿಕ ವಾದ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅವರ ಮೂಲ ಉತ್ತರ ಪ್ರದೇಶದ ‘ಕಿರಾಣಾ’ ಎಂಬ ಗ್ರಾಮ, ಕಿರಾಣಾ ಘರಾಣೆಯ ಮೂಲ ಸ್ಥಳ, ಫಯಾಜ್‌ಖಾನ್‌ರ ತಾತ ಉಸ್ತಾದ್ ಶೇಖ್ ಅಬ್ದುಲ್ಲಾ ಖಾನ್ ಅವರು ಗ್ವಾಲಿಯರ್ ಆಸ್ಥಾನದ ವಿದ್ವಾಂಸರಾಗಿದ್ದರು. ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್ ಅವರು ಜೀವನದ ನೆಲೆ ಆರಸಿ ದಕ್ಷಿಣಕ್ಕೆ ವಲಸೆ ಬಂದರು. ಹೈದರಾಬಾದ್ ನಿಜಾಮ್‌ರ ಆಸ್ಥಾನ, ಮೈಸೂರ ಅರಸರ ಆಸ್ಥಾನದಲ್ಲಿ ಸಾರಂಗಿ ನುಡಿಸುತ್ತಿದ್ದರು. ಅವರಿಗೆ 1950ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಉದ್ಯೋಗ ದೊರಕಿತು. ನಂತರ ಅವರ ತಂದೆಯವರು ಧಾರವಾಡದಲ್ಲೇ ನೆಲೆಸಿದರು. ಈ ಮಧ್ಯದಲ್ಲಿ ಫಯಾಜಖಾನ್‌ರ ತಾತಾ ರೈಲಿನಲ್ಲಿ ಶಿವಮೊಗ್ಗದಿಂದ ಹೈದ್ರಾಬಾದ್‌ಗೆ ಹೋಗಬೇಕಾದರೆ ರೈಲು ಅಪಘಾತದಲ್ಲಿ ತೀರಿಕೊಂಡರು. ಹೀಗಾಗಿ ಅವರ ಮನೆತನ ಉತ್ತರ​‍್ರದೇಶದ ಕಿರಾಣಾದಿಂದ ಧಾರವಾಡದಲ್ಲಿ ನೆಲೆಯೂರಿತು.  

ಫಯಾಜ್‌ಖಾನರು ಫೆಬ್ರುವರಿ 17, 1968ರಂದು ಧಾರವಾಡದಲ್ಲಿ ಜನಿಸಿದರು. ಅವರದು ಸಂಗೀತ ಪರಂಪರೆಯ ಕುಟುಂಬ. ಹೀಗಾಗಿ ಫಯಾಜ್‌ಖಾನ್‌ರು ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಅಧ್ಯಯನ ಶುರುಮಾಡಿದರು. ಅವರಿಗೆ ನಾಲ್ಕೈದು ವರ್ಷವಿರುವಾಗಲೇ ತಂದೆಯಿಂದ ಸಾರಂಗಿ ವಾದನ, ಗಾಯನ ತರಬೇತಿ ಪ್ರಾರಂಭವಾಯಿತು. ಅವರ ತಾಯಿಯವರು ಕೂಡ ಸಾರಂಗಿ ನುಡಿಸುತ್ತಿದ್ದರು. ಆದರೆ ಅವರಿಗೆ ಹೊರಗಡೆ ಹೋಗುವ ಅವಕಾಶವಿಲ್ಲದ ಕಾರಣ ಮನೆಯಲ್ಲೇ ಸಾರಂಗಿ ನುಡಿಸುತ್ತಿದ್ದರು. ಹೀಗೆ ಫಯಾಜ್‌ಖಾನ್‌ರಿಗೆ ತಾಯಿಯೂ ಗುರುವೇ ಆಗಿದ್ದರು. ಅವರು 10 ರಿಂದ 12 ವರ್ಷಗಳ ಕಾಲ ಪಂ.ಬಸವರಾಜ ಬೆಂಡಿಗೇರಿ ಅವರಲ್ಲಿ ತಬಲಾ ವಾದನವನ್ನು ಕಲಿತರು. ಫಯಾಜಖಾನರು ಬಾಲ್ಯದಲ್ಲಿ ತಬಲಾ, ಸಾರಂಗಿ, ತಂಬೂರಿ ಹೀಗೆ ವಾದ್ಯಗಳ ಜೊತೆಗೆ ಆಟವಾಡಿದರು. ಅವರ ಚಿಕ್ಕಪ್ಪ, ಸೋದರಮಾವ ಎಲ್ಲರೂ ಕಲಾವಿದರೇ, ಹೀಗಾಗಿ ಸಂಗೀತ ವಾತಾವರಣದಲ್ಲಿಯೇ ಅವರ ಬಾಲ್ಯ ಕಳೆಯಿತು. ಅವರ ತಂದೆಯವರು ಪಂ. ಭೀಮಸೇನ್ ಜೋಶಿ, ಪಂ.ಗುರುರಾವ್ ದೇಶಪಾಂಡೆ, ಪಂ.ಗಂಗೂಬಾಯಿ ಹಾನಗಲ್‌. ಪಂ.ಮಲ್ಲಿಕಾರ್ಜುನ ಮನ್ಸೂರ, ಪಂ.ಸಂಗಮೇಶ್ವರ ಗುರವ, ಪಂ.ರಾಜಗುರುಗಳು ಅವರಿಗೆಲ್ಲಾ ಸಾಥ್ ನೀಡಲು ಹೋಗುತ್ತಿದ್ದರು. ಹೀಗಾಗಿ ಫಯಾಜಖಾನ್‌ರು ತಂದೆಯವರ ಜೊತೆ ಹೋಗಿ  ಸಂಗೀತವನ್ನು ಕೇಳೂತ್ತ ಕಲಿತರು. 

ಫಯಾಜಖಾನ್‌ರು 16ನೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟದ ದಿನಗಳನ್ನು ಎದುರಿಸಿದರು. ಅವರಿಗೆ 15/-ರೂಪಾಯಿ ಸಿಗದ ಕಾರಣ ಹತ್ತನೆಯ ತರಗತಿ ಪರೀಕ್ಷೆಯ ಹಾಲ್ ಟಿಕೆಟ್‌ನ್ನು ತೆಗೆದುಕೊಳ್ಳಲಾಗಲಿಲ್ಲ. ಹೀಗಾಗಿ ಅವರು ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ತಂದೆಯವರ ಕೋಣೆಯೊಳಗೆ ಹೋದಾಗ ಅವರ ವಾದ್ಯಗಳ ಜೊತೆ ಸಾರಂಗಿಯನ್ನು ಕಂಡರು. ಈ ವಾದ್ಯ ಮೂಕವಾಯ್ತಲ್ಲ ಅಂದುಕೊಂಡು, ತಬಲಾ ನುಡಿಸುವದನ್ನು ಬಿಟ್ಟು ಸಾರಂಗಿ ಕಲಿಯುವ ನಿರ್ಧಾರ ತೆಗೆದುಕೊಂಡರು. ಫಯಾಜಖಾನ್ ತಂದೆಯವರ ಕಡೆ ಕಲಿತಿದ್ದರೂ, ಸಾರಂಗಿ ಕಲಿಯಲು ಗುರುವಿನ ಹುಡುಕಾಟದಲ್ಲಿ ಹೊರಟರು. ಅವರು ಬನಾರಸ್, ಭೋಪಾಲ್  ಮತ್ತು ಮುಂಬೈನಲ್ಲಿ ಗುರುಗಳನ್ನು ಹುಡುಕಿಕೊಂಡು ಸಾಕಷ್ಟು ಅಲೆದಾಡಿದರು. ಮುಂಬೈ ಆಕಾಶವಾಣಿಯಲ್ಲಿ ಯುವ ಕಲಾವಿದರಿಗೆ ಸ್ಪರ್ಧೆ ಇತ್ತು. ಆ ಸ್ಪರ್ಧೆಯಲ್ಲಿ ಫಯಾಜ್ ಖಾನ್ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡರು. ಆ ಸಮಯದಲ್ಲಿ ಪಂ.ರಾಮ್‌ನಾರಾಯಣಜೀ ಅವರ ಸಂಪರ್ಕಕ್ಕೆ ಬಂದರು. ನಂತರ ಫಯಾಜ್‌ಖಾನರನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಗುರುಕುಲ ಮಾದರಿಯಲ್ಲಿ ಅವರ ಮನೆಯಲ್ಲೇ ಇದ್ದುಕೊಂಡು 06 ವರ್ಷಗಳ ಕಾಲ ಸಾರಂಗಿ ಮತ್ತು ಗಾಯನವನ್ನು ಶೃದ್ಧೆಯಿಂದ ಕಲಿತರು. ಹೀಗೆ ಪಂ.ರಂಗನಾಥ ಜೋಶಿ ಹಾಗೂ ಪಂ.ಸುರೇಶಬಾಬು ಮಾನೆ ಅವರಲ್ಲಿಯೂ ಸಂಗೀತ ವಿದ್ಯೆಯನ್ನು ಕಲಿತರು. 

ಉಸ್ತಾದ್ ಫಯಾಜ್‌ಖಾನ್‌ರು ತಂಗಿಯ ಮನೆಯಲ್ಲಿ ಸಾರಂಗಿ ಮತ್ತು ಹಾಡುಗಾರಿಕೆಯ ಅಭ್ಯಾಸದಲ್ಲಿ ತೊಡಗಿದರು. ಅವರು ಇಡೀ ರಾತ್ರಿ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ನೆರೆಹೊರೆಯವರಿಗೆ ತೊಂದರೆಯಾಗಿ ಸುಡಗಾಡದಲ್ಲಿ ಅಭ್ಯಾಸ ಮಾಡು ಎಂದು ಹೇಳಿದರು. ಹಾಗೆಯೇ ಫಯಾಜ್‌ಖಾನ್‌ರು ಸ್ಮಶಾನಕ್ಕೆ ಹೋಗಿ ಮಧ್ಯರಾತ್ರಿ 2ರವರೆಗೆ ಅಭ್ಯಾಸ ಮಾಡಿ ಬರುತ್ತಿದ್ದರು. ನಂತರ ಅವರು ಹನಮಂತ ದೇವರ ಹಾಗೂ ಕಾಳಮ್ಮನ ದೇವಸ್ಥಾನದಲ್ಲಿ 41ದಿನಗಳ ವರೆಗೆ ನಿತ್ಯವೂ 12ಗಂಟೆಗಳ ಕಾಲ ಅಭ್ಯಾಸ ಮಾಡಿದರು. ಹೀಗೆಯೇ ಬಡತನ, ಬದುಕಿನ ಹಲವು ಸವಾಲುಗಳ ನಡುವೆಯೂ ಅಪ್ರತಿಮ ಕಲಾವಿದರಾಗಿ ಹೊರಹೊಮ್ಮಿದರು. ಉಸ್ತಾದ ಫಯಾಜ್‌ಖಾನರು ಅತ್ಯಪರೂಪದ ಸಾರಂಗಿಯ ಅಪ್ರತಿಮ ವಾದಕ, ಸುಮಧುರ ಗಾಯಕರಾಗಿ ಬೆಳೆದು ನಿಂತರು. 1995ರಲ್ಲಿ ಅವರು ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸಿದರು. 

ಫಯಾಜ್‌ಖಾನರು ಮಾಯಾರಾವ್ ಅವರ ಕಥ್‌ಕ ಸಂಸ್ಥೆ ಮತ್ತು ನಿರುಪಮಾ ರಾಜೇಂದ್ರರ ಬ್ಯಾಲೆಗಳಿಗೆ ಸಂಗೀತ ಸಂಯೋಜನೆಗಳನ್ನು ಮಾಡಿದರು. ಅವರು ಉಪೇಂದ್ರಕುಮಾರ, ರಾಜನ್ ನಾಗೇಂದ್ರ, ವಿಜಯಭಾಸ್ಕರ, ಹಂಸಲೇಖ, ಇಳಯರಾಜ, ಎ.ಆರ್‌.ರೆಹಮಾನ್, ಎಂ.ಎಂ.ಕೀರ್ವಾಣಿ, ರಾಮನ್ ಗೌಕುಲ ಮುಂತಾದ ಸಂಗೀತ ದಿಗ್ಗಜರೊಂದಿಗೆ ಕೆಲಸ ಮಾಡಿ ಪ್ರಸಿದ್ಧಿಗಳಿಸಿದರು. ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ದಾಸವಾಣಿ, ವಚನವಾಣಿ, ಧಾರಾವಾಹಿ ಶೀರ್ಷಿಕೆ ಗೀತೆ, ಸಿನಿಮಾ ಹಿನ್ನೆಲೆ ಸಂಗೀತದಲ್ಲೂ ಗುರುತಿಸಿಕೊಂಡಿದ್ದಾರೆ. ಎರಡು ಸಾವಿರಕ್ಕಿಂತಲೂ ಹೆಚ್ಚು ಬಂದಿಶ್‌ಗಳನ್ನು ಬರೆದು ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಉಸ್ತಾದ್ ಫಯಾಜ್‌ಖಾನರು ಹಲವಾರು ವೈವಿದ್ಯಮಯ ಸಂಗೀತದ ಅಲ್ಬಮ್‌ಗಳಿಗೆ ಹಾಡುಗಳ ರಸಸ್ಪಾದನೆಯನ್ನು ಒದಗಿಸಿ, ಜಗದುದ್ದಗಲಕ್ಕೂ ಸಂಚರಿಸಿ ಸಂಗೀತ ಕಛೇರಿಗಳನ್ನು ನೀಡಿ ಕೇಳುಗರ ಮನಸ್ಸನ್ನು ಗೆದ್ದಿದ್ದಾರೆ. ಅವರು ಮಲೇಷಿಯಾ, ದುಬೈ, ಓಮನ್, ಚೀನಾ, ಸಿಂಗಪುರ, ಜರ್ಮನಿ, ಫ್ರಾನ್, ಯುರೋಪ, ಕೆನಡಾ ಮುಂತಾದ ವಿದೇಶಗಳಲ್ಲಿ ತಮ್ಮ ಸಂಗೀತದೊಂದಿಗೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ್ದಾರೆ.  

ಅವರು ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಉಸ್ತಾದ ಫಯಾಜ್‌ಖಾನರು ಪರ್ವೀನ್ ಬೇಗಂ ಅವರನ್ನು ಮದುವೆಯಾದರು. ಪರ್ವೀನ್ ಬೇಗಂ ಅವರು ಫಯಾಜ್‌ಖಾನರಿಗೆ ಒಳ್ಳೆಯ ಜೀವನ ಸಾಥಿಯಾದರು. ಆ ಕಾರಣದಿಂದಾಗಿಯೇ ಅವರು ಸದಾಕಾಲ ನೆಮ್ಮದಿಯಿಂದ ಇದ್ದರು. ಅವರಿಗೆ ಈರ‌್ವರು ಮಕ್ಕಳು. ಸರ್‌ಫ್‌ರಾಜಖಾನ್ ಮತ್ತು ಫರಾಜ್‌ಖಾನ್, ಈರ‌್ವರೂ ಸಂಗೀತ ಕ್ಷೇತ್ರದಲ್ಲೇ ತೊಡಗಿಸಿಕೊಂಡಿದ್ದಾರೆ. ಕಳೆದ ಎಂಟುವರ್ಷಗಳ ಹಿಂದೆಯೇ ಫಯಾಜಖಾನ್‌ರು ಅಪಘಾತದಲ್ಲಿ ಜೀವನ ಸಂಗಾತಿ ಪವೀನ್ ಬೇಗಂ ಅವರನ್ನು ಕಳೆದುಕೊಂಡರು. ಅವರು ಮಾನಸಿಕವಾಗಿ ಬಹಳ ಹಿಂಸೆಯನ್ನು ಅನುಭವಿಸಿದರು. ತಂದೆಯವರು ತೀರಿಕೊಂಡಾಗಲೂ ಅವರು ಇದೇ ರೀತಿ ನೋವನ್ನು ಅನುಭವಿಸಿದ್ದರು. ದುಃಖದಿಂದ ಹೊರಬಂದು ಫಯಾಜ್‌ಖಾನರು ‘ಪರ್ವೀನ್ ಬೇಗಂ ಸಂಗೀತ ಮತ್ತು ಶಿಕ್ಷಣ ಟ್ರಸ್ಟ್‌’ ನ್ನು ಸ್ಥಾಪಿಸಿ, ಸಂಗೀತ ಪ್ರತಿಭೆಗಳಿಗೆ ಸಂಗೀತದ ಧಾರೆಯನ್ನು ಎರೆಯುತ್ತಿದ್ದಾರೆ. 

ಸಾರಂಗಿ ಎಂದರೆ ಸೌರಂಗ್ ಅಥವಾ ನೂರಾರು ರಾಗಗಳು ಎಂದರ್ಥ. ಸಾಮಾನ್ಯವಾಗಿ ಸಾರಂಗಿ ಕಲಾವಿದರ ವಾದ್ಯಗಳು 50 ರಿಂದ 100 ವರ್ಷಗಳಷ್ಟು ಹಳೆಯವು. ಒಂದೊಂದು ವಾದ್ಯವು ತನ್ನ ಅಂತರಂಗದಲ್ಲಿ ಇತಿಹಾಸವನ್ನೇ ತುಂಬಿಕೊಂಡಿರುತ್ತದೆ. ಪ್ರಧಾನವಾಗಿ ಮೀರತ್, ಮುರದಾಬಾದ್‌ನಂಥ ಕೇಂದ್ರಗಳಲ್ಲಿ ತಯಾರಾಗುವ ವಾದ್ಯವಿದು. ಸಾರಂಗಿಯ ತಯಾರಿಕೆ ಒಂದು ಬಗೆಯ ಸವಾಲಾದರೆ, ಅದರ ನುಡಿಸುವಿಕೆಯಂತೂ ಸುದೀರ್ಘ ಕಸರತ್ತನ್ನು ಕಡ್ಡಾಯವಾಗಿ ಬೇಡುತ್ತದೆ. ಬೆರಳ ತುದಿ ಮತ್ತು ಉಗುರಿನ ಬುಡಭಾಗದಿಂದ ನುಡಿಸುವ ಅಪರೂಪ ವಾದನಕ್ರಮದ ಸಾರಂಗಿಯಲ್ಲಿ ಮೂರು ಮುಖ್ಯ ತಂತಿಗಳೊಂದಿಗೆ ನಾಲ್ಕು ವಿವಿಧ ಹಂತಗಳಲ್ಲಿ ಜೋಡಿಸಲಾದ ಅಂದಾಜು 35 ರಿಂದ 40ರಷ್ಟು ಲೋಹದ ತರಹ ಅಥವಾ ಅನುರಣಿಸುವ ತಂತಿಗಳಿರುತ್ತವೆ. ನಿಖರವಾಗಿ ಶ್ರುತಿ ಮಾಡಿದ ಸಾರಂಗಿಯೊಂದು ಜೇನುಗೂಡಿನ ಝೇಂಕಾರವನ್ನು ಹೊಮ್ಮಿಸಬಲ್ಲದು ಎನ್ನುವ ಮಾತಿದೆ. ಅಚ್ಚರಿಯೆಂದರೇ ಉಸ್ತಾದ ಫಯಾಜ್‌ಖಾನ್‌ರು ಮಗ ಸರ್‌ಫ್‌ರಾಜ್‌ಖಾನ್ ಸಾರಂಗಿವಾದನದಲ್ಲಿ ಬೆಳೆದು ನಿಂತಿದ್ದಾರೆ. ಅವರನ್ನು ಯುವತಲೆಮಾರಿಗೆ ಸೇರಿದ ಸಾರಂಗಿಲೋಕದ ಆಶಾಕಿರಣ ಎಂದೆಲ್ಲ ಬಣ್ಣಿಸುತ್ತಾರೆ. 

ಅವರ ಸಂಗೀತ ಸೇವೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಕಲಾ ಶ್ರೀ, ಆಲ್ ಇಂಡಿಯಾ ರೇಡಿಯೋ ರಾಷ್ಟ್ರೀಯ ಸಂಗೀತ ಪ್ರಶಸ್ತಿ, ಆರ್ಯಭಟ್ಟ ಪ್ರಶಸ್ತಿ, ಪಂ.ಪುಟ್ಟುರಾಜ ಕೃಪಾಭೂಷಣ ಸಮ್ಮಾನ, ಕೇರಳ ಸರ್ಕಾರದ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲಾ ಕೌಮುದಿ, ಕಲಾ ವಸಂತ, ಕಲಾ ದರ​‍್ಣ, ನಿರ್ಮಾಣ್ ಪುರಂದರ ಸಂಗೀತ ರತ್ನ ಪ್ರಶಸ್ತಿ, ವಿದುಷಿ ಕೃಷ್ಣ ಹಾನಗಲ್ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಅತ್ಯುತ್ತಮ ಕಾರ್ಯನಿರ್ವಹಿಸಿದ್ದಾರೆ. 

ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಉಸ್ತಾದ್ ಫಯಾಜ್‌ಖಾನ್ ಸಹ ಒಬ್ಬರು. ಅವರ ಹೆಸರು ಕೇಳಿದರೆ ಸಾಕು, ಹಿಂದೂಸ್ತಾನಿ ಸಂಗೀತ ಆಸ್ವಾದಕರ ಕಿವಿಗಳಂತೂ ಹಳೆಯ ಕಾಲಕ್ಕೆ ಹೊರಳುತ್ತವೆ. ಅವರ ಸಾರಂಗಿ ಕೇಳಿದರೆ ಸಂಗೀತದಲ್ಲಿ ಆಸಕ್ತಿ ಇಲ್ಲದವರೂ ಭಾವ ಪರವಶರಾಗುತ್ತಾರೆ. ಪ್ರಖ್ಯಾತ ಸಂಗೀತ ಪರಂಪರೆಯ ಅವರು ಇಂದಿನ ಆಧುನಿಕ ದಿನಗಳಲ್ಲಿ ಪಾರಂಪರಿಕ ಸಾರಂಗಿ ವಾದನ ಕಲೆಯನ್ನು ಜೀವಂತವಾಗಿರಿಸಿದ್ದಾರೆ.  

ಸುರೇಶ ಗುದಗನವರ 

ಧಾರವಾಡ  

9449294694