“ಮಹಿಳಾ ವಿವಿಯಲ್ಲಿ ಮಾಧ್ಯಮ ಕೌಶಲಗಳಿಗೆ ವಿಪುಲ ಅವಕಾಶ”

 “ಮಹಿಳಾ ವಿವಿಯಲ್ಲಿ ಮಾಧ್ಯಮ ಕೌಶಲಗಳಿಗೆ ವಿಪುಲ ಅವಕಾಶ” “Abundant opportunities for media skills at women's universities”

ಲೋಕದರ್ಶನ ವರದಿ 

ವಿಜಯಪುರ 26 : ವಿವಿಧ ಮಾಧ್ಯಮ ಕೌಶಲಗಳನ್ನು ಕಲಿತುಕೊಳ್ಳಬೇಕಾದರೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ವಿಪುಲ ಅವಕಾಶಗಳಿವೆ ಎಂದು ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಹೇಳಿದರು. 

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ, ಮಾಧ್ಯಮ ಕ್ಷೇತ್ರದ ಪ್ರಾಯೋಗಿಕ ಜ್ಞಾನವನ್ನು ಅರಿಯುವ ಉದ್ದೇಶದಿಂದ ವಿಜಯಪುರದ ಬಿಡಿಈ ಸೊಸೈಟಿಯ ಕಾಲೇಜಿನ ವಿದ್ಯಾರ್ಥಿನಿಯರು ಇತ್ತೀಚೆಗೆ ಪ್ರಾತ್ಯಕ್ಷಿಕ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. 

ವಿದ್ಯಾರ್ಥಿನಿಯರು ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಮಾಧ್ಯಮ ಕ್ಷೇತ್ರದ ನೈಜ ಅನುಭವವನ್ನು ಪಡೆದುಕೊಳ್ಳುವುದು ಅತ್ಯಾವಶ್ಯಕ. ಯಾವುದೇ ವಿಷಯದಲ್ಲಿ ಸ್ನಾತಕ ಪದವಿ ಪಡೆದಿರುವ ವಿದ್ಯಾರ್ಥಿನಿಯರು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಂಎ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅವಕಾಶಗಳಿವೆ. ಎರಡು ವರ್ಷದ ಈ ಕೋರ್ಸ್‌ ಪೂರ್ಣಗೊಳಿಸಿದಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ವಿವರಿಸಿದರು. 

ಇದೇ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್ ನಾಯಕ್ ಮಾತನಾಡಿ, ನ್ಯೂಸ್ ರೀಡಿಂಗ್‌ಗೆ ಅಗತ್ಯವಾದ ಸೆಟ್, ಕ್ಯಾಮೆರಾ ವ್ಯವಸ್ಥೆ, ಲೈಟಿಂಗ್, ಸೌಂಡ್ ರೆಕಾಡಿಂರ್ಗ್ ಹಾಗೂ ಪ್ರಸಾರ ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  

ವಿದ್ಯಾರ್ಥಿನಿಯರಿಗೆ ನೈಜ ಮಾಧ್ಯಮ ಅನುಭವ ಕಲ್ಪಿಸುವ ಉದ್ದೇಶದಿಂದ ಸ್ಟುಡಿಯೋವನ್ನು ಪ್ರಾಯೋಗಿಕ ತರಬೇತಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ಅವರು ವಿವರಿಸಿದರು. ಈ ಸೌಲಭ್ಯಗಳು ವಿದ್ಯಾರ್ಥಿನಿಯರ ಗಮನ ಸೆಳೆದು, ಅವರಿಗೆ ಹೊಸ ಉತ್ಸಾಹವನ್ನು ತುಂಬಿದವು ಅಷ್ಟೇ ಅಲ್ಲ, ಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳನ್ನು ಪರಿಚಯಿಸಿಕೊಂಡ ವಿದ್ಯಾರ್ಥಿನಿಯರಲ್ಲಿ ಕುತೂಹಲ ಮೂಡಿತು. ವಿದ್ಯಾರ್ಥಿನಿಯರು ಅತ್ಯಾಧುನಿಕ ಸ್ಟುಡಿಯೋ ವ್ಯವಸ್ಥೆಯನ್ನು ನೇರವಾಗಿ ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರ ತಂಡದ ನೇತೃತ್ವವನ್ನು ಬಿಡಿಈ ಸೊಸೈಟಿಯ ಕಾಲೇಜಿನ ಅಧ್ಯಾಪಕರಾದ ಡಾ.ಸೀಮಾ ಹೊನವಾಡ, ಡಾ.ಸವಿತಾ ಪಾಟೀಲ್ ಮತ್ತು ಅನಿತಾ ಹುಳ್ಳೂರು ವಹಿಸಿದ್ದರು.