ವಿವಿಧ ಪಂಚಾಯತಿಗಳಿಗೆ ಜಿ.ಪಂ.ಸಿಇಓ ರಿಷಿ ಆನಂದ ಭೇಟಿ : ಪರೀಶೀಲನೆ

Z.P.CEO Rishi Ananda visit to various Panchayats: review

ಪಂಚಾಯತಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ 

ವಿಜಯಪುರ, ನವೆಂಬರ 28: ಬಸವನಬಾಗೇವಾಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಬುಧವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.  

ಬಸವನ ಬಾಗೇವಾಡಿ ತಾಲೂಕು ಪಂಚಾಯಿತಿ ಮತ್ತು ನರಸಲಗಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರೀಶೀಲನೆ, ತಾಲೂಕು ಪಂಚಾಯಿತಿ ಕಛೇರಿ ಸಿಬ್ಬಂದಿ ಹಾಜರಾತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರೀಶೀಲನೆ ನಡೆಸಿದ ಅವರು, ಕಛೇರಿ ಒಳಾಂಗಣ ಹಾಗೂ ಹೊರಾಂಗಣ ಆವರಣಗಳನ್ನು ಪ್ರತಿದಿನ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಮತ್ತು ಪ್ರತಿ ಮಾಹೆಯ ಮೊದಲನೇ ಶನಿವಾರ ಸ್ವಚ್ಛ ಶನಿವಾರ ಆಚರಣೆ ಮಾಡುವಂತೆ ಅವರು ಸೂಚನೆ ನೀಡಿದರು.  

ನರಸಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡಿ,   ಮಕ್ಕಳ ಹಾಜರಾತಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಬಿಸಿಯೂಟ ಕೋಣೆ ಮತ್ತು ದಾಸ್ತಾನುಗಳನ್ನು ಪರೀಶೀಲಿಸಿದರು. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡಬೇಕು. ಸದರಿ ಕೇಂದ್ರದ ಮಕ್ಕಳಿಗೆ ಸರಿಯಾಗಿ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಕೇಂದ್ರದಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಶಿಸ್ತು ಪಾಲನೆ ಹಾಗೂ ಕಲಿಕೆಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರದ ಸಮರ​‍್ಕ ವಿತರಣೆ ಮಾಡಬೇಕು. ಪ್ರತಿ ಮಾಹೆ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಸೂಚನೆ ನೀಡಿದರು,.  

ಪ್ರತಿ ವಾರ ಶ್ರಮದಾನ ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಕಡ್ಡಾಯವಾಗಿ ವಿತರಣೆ ಮಾಡಬೇಕು. ಸರ್ಕಾರಿ ಶಾಲೆಯಲ್ಲಿಯೂ ಸಹ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟವನ್ನು ತಯಾರಿಸಿ ವಿತರಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಸೂಚಿಸಿದರು.  

ನರಸಲಗಿ ಗ್ರಾಮದ ಪ್ರೌಢ ಶಾಲೆಗೆ ಭೇಟಿ ನೀಡಿ, ಹತ್ತನೇ ತರಗತಿ ಕೊಠಡಿಗೆ ತೆರಳಿ ಮಕ್ಕಳ ಕಲಿಕಾ ಮಟ್ಟವನ್ನು ಪರೀಶೀಲಿಸಿದರು. ಇದೇ ವೇಳೆ 10ನೇ ತರಗತಿಯ ಮಕ್ಕಳಿಗೆ ಗಣಿತ ವಿಷಯವನ್ನು ಬೋಧನೆ ಮಾಡಿದ ಅವರು, ಹತ್ತನೇ ತರಗತಿಯ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಗಮನವಿಟ್ಟು ಓದಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಬಳಿಕ ನರಸಲಗಿ  ಹಿಂದುಳಿದ ವರ್ಗದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಆವರಣ,  ಆಹಾರ ಕೋಣೆ,  ಶುದ್ದ ಕುಡಿಯುವ ನೀರು, ಅಡುಗೆ ಕೋಣೆ, ಗ್ರಂಥಾಲಯ ಪರೀಶೀಲಿಸಿ, ಅಡುಗೆ ಕೋಣೆ, ವಸತಿ ಕೋಣೆ, ಶೌಚಾಲಯ ಮತ್ತು ಆವರಣವನ್ನು ಪರಿಶಿಲಿಸಿದರು. ನಿಲಯದ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪೌಷ್ಟಿಕ ಕೈತೋಟವನ್ನು ನಿರ್ಮಿಸಿಕೊಳ್ಳಲು ಅಲ್ಲಿನ ಸಿಬ್ಬಂದಿಗೆ ಸಲಹೆ ನೀಡಿದರು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೊಠಡಿ ವ್ಯವಸ್ಥೆ ಬೆಡ್ ವ್ಯವಸ್ಥೆಗಳು ಕಡಿಮೆ ಇದ್ದಲ್ಲಿ ಜಿಲ್ಲಾ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ವಸತಿ ನಿಲಯದ ವಾರ್ಡನ್ ರವರಿಗೆ ಸೂಚನೆ ನೀಡಿದರು. 

 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ ಪರೀಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ನಿರಂತರ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ನರಸಲಗಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿ ನಿಲಯಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರೀಶೀಲಿಸಿದ ಅವರು,  ವಸತಿ ನಿಲಯದ ಸ್ವಚ್ಛತೆ ಮತ್ತು ಶಿಸ್ತು ಪಾಲನೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ವಸತಿ ನಿಲಯದಲ್ಲಿ ಕುಡಿಯುವ ನೀರು ಮತ್ತು ಇತರೆ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿಲಯ ಪಾಲಕರಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎ ಎಮ್ ನರಸರಡ್ಡಿ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ನಿಲಯಪಾಲಕರಾದ ರಸೂಲಸಾಬ, ಅಂಗನವಾಡಿ ಕಾರ್ಯಕರ್ತೆ ಗೀತಾ ಚಿಂಚೂಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.