ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು

ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು Youth brutally assaulted by five policemen: Citizens protest; 'Neelagara Ganapathi' darshan cancelle

ಸಂಕೇಶ್ವರ : ಪಟ್ಟಣದ ನೀಲಗಾರ ಗಣಪತಿಯ ಬಂದೋಬಸ್ತಿ ಹೆಸರಿನಲ್ಲಿ ಐವರು ಪೋಲೀಸರು ಅದೇ ಗಲ್ಲಿಯ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಹಲ್ಲೆ ಪ್ರಕರಣವನ್ನು ಖಂಡಿಸಿ ನಾಗರಿಕರು  ಪ್ರತಿಭಟನೆ ನಡೆಸಿದ್ದು, ಇದರಿಂದ ಕೆಲಹೊತ್ತು ನೀಲಗಾರ ಗಣೇಶನ ದರ್ಶನವನ್ನು ತಡೆಹಿಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. 

     ಹಲ್ಲೆಗೆ ಒಳಗಾಗಿರುವ ಯುವಕನನ್ನು ರಾಹುಲ್ ಕುಂಬಾರ ಎಂದು ಗುರುತಿಸಲಾಗಿದ್ದು, ಈತನ ಮನೆಯು ನೀಲಗಾರ ಗಣಪತಿ ಪ್ರತಿಷ್ಠಾಪನೆ ಮಾಡಲಾದ ಹೆದ್ದುರಶೆಟ್ಟಿ ಗಲ್ಲಿ ಬಳಿಯ ಕುಂಬಾರ ಗಲ್ಲಿಯಲ್ಲಿ ಇದ್ದು, ಈತ ತಮ್ಮ ಮನೆಗೆ ತೆರಳುತಿರುವಾಗ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾದ ಐವರು ಪೊಲೀಸರು ರಾಹುಲ್ ಈತನನ್ನು ತಡೆದು ಗಣೇಶ ದರ್ಶನಕ್ಕೆ ಸರದಿಯಲ್ಲಿ ನಿಲ್ಲುವಂತೆ ಹೇಳಿದ್ದಾರೆ.

   ಆದರೆ ತಾನು ಗಣೇಶ ದರ್ಶನಕ್ಕೆ ಹೊರಟಿಲ್ಲ. ತಮ್ಮ ಮನೆಯು ಅದೇ ಗಲ್ಲಿಯಲ್ಲಿ ಇದೆ. ಮನೆಗೆ ಹೋಗುತ್ತಿರುವದಾಗಿ ರಾಹುಲ್ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಆತನ ಹೇಳಿಕೆಯನ್ನು ನಂಬಂದೆ ಪೊಲೀಸರು ಹಾಗೂ ಹಲ್ಲೆಗೆ ಒಳಗಾದ ರಾಹುಲ್ ಈತನ ನಡುವೆ ಮಾತಿನ ಚಕಮಕಿ ನಡೆದು, ಐವರು ಪೊಲೀಸರು ಯುವಕನಿಗೆ ಅವಾಚ್ಯವಾಗಿ ನಿಂದಿಸಿ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಯುವಕ ರಾಹುಲ್ ಹೇಳಿದ್ದಾನೆ. 

    ಈ ಹಲ್ಲೆಯನ್ನು ಖಂಡಿಸಿ ಆ ಪ್ರದೇಶದ ನಾಗರಿಕರು ಹಲ್ಲೆ ಮಾಡಿರುವ ಪೊಲೀಸರನ್ನು ಅಮಾನತು ಮಾಡುವಂತೆ ಪ್ರತಿಭಟನೆ ಮೂಲಕ ಪಟ್ಟು ಹಿಡಿದರು. ಇದರಿಂದ ನೀಲಗಾರ ಗಣೇಶ್ ದರ್ಶನ ವನ್ನು ಮೂರು ಗಂಟೆಗಳ ಕಾಲ ರದ್ದು ಮಾಡಲಾಯಿತು. 

  ಬಳಿಕ ನ್ಯಾಯಕ್ಕಾಗಿ ನಾಗರಿಕರು ಸಿಪಿಐ ಗಣಪತಿ ಕೊಂಗನೋಳಿ ಅವರನ್ನು ಘೇರಾವು ಹಾಕಿದ ಘಟನೆ ಕೂಡಾ ನಡೆಯಿತು. 

    ಸದ್ಯ ಹಲ್ಲೆಗೆ ಒಳಗಾಗಿರುವ ಯುವಕನ ಮೈತುಂಬೆಲ್ಲಾ ಬಾಸುಂಡೆಗಳಿದ್ದು, ಯುವಕನನ್ನು ಸದ್ಯ ಉಪಚಾರಕ್ಕಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

   ಬಳಿಕ ಸೋಮವಾರ ಸಂಜೆ ಶಾಸಕ ನಿಖಿಲ್ ಕತ್ತಿ ಹಾಗೂ ಗೋಕಾಕ ಡಿಎಸ್ ಪಿ ಅವರ ನೇತ್ರತ್ವದಲ್ಲಿ ಸಂಧಾನ ಸಭೆ ಕರೆಯಲಾಗಿತ್ತು. ಆದರೆ ಸಂದಾನ ಸಭೆ ಯಾವ ಹಂತ ತಲುಪಿದೆ ಎನ್ನುವದು ತಿಳಿದಿಲ್ಲ.