ಬಳ್ಳಾರಿಯಲ್ಲಿ ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ
World Anti-Human Trafficking Day celebrated in Bellary
ಲೋಕದರ್ಶನ ವರದಿ
ಬಳ್ಳಾರಿ, ಜು.30: ಅಮಾಯಕ ಮಕ್ಕಳು ಹಾಗೂ ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡಿರುವ ಮಾನವ ಕಳ್ಳಸಾಗಣೆ ಜಾಲಗಳನ್ನು ಪರಿಣಾಮಕಾರಿಯಾಗಿ ಭೇದಿಸಲು ಸಾಂಪ್ರದಾಯಿಕ ತನಿಖೆ ಮಾತ್ರ ಸಾಕಾಗುವುದಿಲ್ಲ. ಎಲೆಕ್ಟ್ರಾನಿಕ್ ಸಾಕ್ಷ್ಯಗಳು, ಡಿಎನ್‌ಎ ತಂತ್ರಜ್ಞಾನ ಹಾಗೂ ಆಧುನಿಕ ತನಿಖಾ ವಿಧಾನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಹೇಳಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ’ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿ ಭಾಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಾಲಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಸ್ಥಳ ಮಹಜರು ಹಾಗೂ ವಿಚಾರಣೆಯ ಸಂಪೂರ್ಣ ವಿಡಿಯೋಗ್ರಫಿ ಕಡ್ಡಾಯವಾಗಬೇಕು ಎಂದರು. ಎಫ್‌ಐಆರ್ ದಾಖಲಾದ ತಕ್ಷಣವೇ ನ್ಯಾಯಾಲಯಕ್ಕೆ ಆನ್ಲೈನ್ ಮೂಲಕ ಮಾಹಿತಿ ಸಲ್ಲಿಸುವ ವ್ಯವಸ್ಥೆಯಿಂದ ಸಾಕ್ಷ್ಯ ನಾಶವಾಗುವುದನ್ನು ತಡೆಯಬಹುದು ಎಂದು ಹೇಳಿದರು.
ಕಳ್ಳಸಾಗಣೆ ಪ್ರಕರಣಗಳಲ್ಲಿ ಕೇವಲ ಮಧ್ಯವರ್ತಿಗಳನ್ನು ಬಂಧಿಸುವುದಕ್ಕಿಂತ, ಜಾಲದ ಹಿಂದಿರುವ ಪ್ರಮುಖ ಸೂತ್ರಧಾರರನ್ನು ಪತ್ತೆಹಚ್ಚುವುದೇ ತನಿಖೆಯ ಮುಖ್ಯ ಗುರಿಯಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಮಾನವ ಕಳ್ಳಸಾಗಣೆ ತಡೆಗೆ ವಿವಿಧ ಇಲಾಖೆಗಳು, ಪೊಲೀಸ್ ಇಲಾಖೆ ಹಾಗೂ ಸರ್ಕಾರೇತರ ಸಂಘಟನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಗುಣಮಟ್ಟದ ತನಿಖೆ, ಸಮರ್ಕ ಸಾಕ್ಷ್ಯ ಸಂಗ್ರಹ ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನದಿಂದ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಬೇಕೆಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಅವರು ಮಾನವ ಕಳ್ಳಸಾಗಣೆ ತಡೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ನ್ಯಾಯಾಲಯದ ವಕೀಲೆ ಶಿವಲೀಲಾ ಅವರು ಮಾತನಾಡಿ, ಕುಟುಂಬ, ಶಾಲೆ-ಕಾಲೇಜುಗಳು ಹಾಗೂ ಸಾರ್ವಜನಿಕರ ಜಾಗೃತಿಯ ಮೂಲಕವೇ ಮಾನವ ಕಳ್ಳಸಾಗಣೆ ಎಂಬ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್ ಎಂ. ಸ್ವಾಗತಿಸಿ, ಲೈಂಗಿಕ ಶೋಷಣೆ, ಬಲವಂತದ ದುಡಿಮೆ ಹಾಗೂ ಭಿಕ್ಷಾಟನೆಗೆ ತಳ್ಳಲ್ಪಡುವ ದುರ್ಬಲ ವರ್ಗದವರ ರಕ್ಷಣೆಗೆ ವ್ಯಾಪಕ ಜಾಗೃತಿ ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 