ಮೆಲ್ಬೋರ್ನ್, ಫೆ 27 : ಕೊನೆಯ ಎಸೆತದವೆಗೂ ತೀವ್ರ ಕುತೂಹಲ ಕೆರಳಿಸಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಂತಿಮ ಕ್ಷಣದಲ್ಲಿ ನಾಲ್ಕು ರನ್ಗಳ ರೋಚಕ ಜಯ ಸಾಧಿಸಿತು. ಆ ಮೂಲಕ ಸೆಮಿಫೈನಲ್ ಪ್ರವೇಶ ಮಾಡಿತು.
ಇಲ್ಲಿನ, ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 134 ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ ಕೊನೆಯ ಎಸೆತದವರೆಗೂ ಹೋರಾಟ ನಡೆಸಿತಾದರೂ ನಿಗದಿತ 20 ಓವರ್ಗಳಿಗೆ ಆರು ವಿಕೆಟ್ ಕಳೆದುಕೊಂಡು 129 ರನ್ ಗಳಿಗೆ ಶಕ್ತವಾಯಿತು. ಆ ಮೂಲಕ ಕೇವಲ ನಾಲ್ಕು ರನ್ಗಳಿಂದ ಸೋಲು ಒಪ್ಪಿಕೊಂಡಿತು.
ನ್ಯೂಜಿಲೆಂಡ್ ಇನಿಂಗ್ಸ್ನಲ್ಲಿ ಅತ್ಯಂತ ಆಕರ್ಷಣೆಯ ಬ್ಯಾಟಿಂಗ್ ಮಡಿದ ಅಮೇಲಿಯಾ ಕೆರ್ ಅಂತಿಮ ಎಸೆತದವರೆಗೂ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಕೇವಲ 19 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 34 ರನ್ ಗಳಿಸಿದರು. ಆ ಮೂಲಕ ತಂಡದ ಗೆಲುವಿಗೆ ಸಾಕಷ್ಟು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.
ಇದಕ್ಕೂ ಮುನ್ನ ಮಧ್ಯಮ ಕ್ರಮಾಂಕದಲ್ಲಿ ಮ್ಯಾಡಿ ಗ್ರೀನ್ ಮತ್ತು ಕ್ಯಾಟಿ ಮಾರ್ಟಿನ್ ಕ್ರಮವಾಗಿ 24 ಮತ್ತು 25 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನುಳಿದಂತೆ ನಾಯಕಿ ಸೋಫಿಯಾ ಡಿವೈನ್(14) ಸೇರಿದಂತೆ ರಾಚೆಲ್ ಪ್ರೀಸ್ಟ್(12) ಹಾಗೂ ಸೂಜಿ ಬೇಟ್ಸ್(6) ನಿರಾಸೆ ಮೂಡಿಸಿದರು.
ನ್ಯೂಜಿಲೆಂಡ್ ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿದ್ದರೂ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ಗೆದ್ದು ಬೀಗಿತು. ಎಲ್ಲ ಬೌಲರ್ಗಳು ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನ್ಯೂಜಿಲೆಂಡ್ ನಾಯಕಿ ಸೋಫಿಯಾ ಡಿವೈನ್ ನಿರ್ಧಾರವನ್ನು ತಂಡದ ಬೌಲಿಂಗ್ ವಿಭಾಗ ಸಮರ್ಥಿಸಿಕೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ನಿಗದಿತ 20 ಓವರ್ ಗಳಿಗೆ ಎಂಡು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್ ಗೆ 134 ರನ್ ಸಾಧಾರಣ ಗುರಿ ನೀಡಿತ್ತು
ಪ್ರಸ್ತುತ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿರುವ ಶಫಾಲಿ ವರ್ಮಾ ಅವರು ನಿರೀಕ್ಷೆಯಂತೆ ಅದ್ಭುತ ಬ್ಯಾಟಿಂಗ್ ಮಾಡಿದರು. ಆರಂಭದಿಂದಲೇ ಅಬ್ಬರಿಸಿದ ವರ್ಮಾ ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಿದ್ದರು. ಎರಡು ಜೀವದಾನ ಪಡೆದ ಶಫಾಲಿ, ಸ್ಫೋಟಕ ಬ್ಯಾಟಿಂಗ್ ಗೆ ಮೊರೆ ಹೋದರು. ಕೇವಲ 34 ಎಸೆತಗಳಿಗೆ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 46 ರನ್ ಚಚ್ಚಿದರು, ಅರ್ಧಶತಕದಂಚಿನಲ್ಲಿ ಅಮೇಲಿಯಾ ಕೆರ್ ಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಟಗಾರ್ತಿ ಸ್ಮೃತಿ ಮಾಂಧನ 11 ರನ್ ಗಳಿಸಿ ತಹುಹಾಗೆ ವಿಕೆಟ್ ಒಪ್ಪಿಸಿದರು. ತಾನಿಯಾ ಭಾಟಿಯಾ ಅವರು 23 ರನ್ ಗಳಿಸಿ ವಿಕೆಟ್ ಕೊಟ್ಟರೆ, ಜೆಮಿಮಾ ರೊಡ್ರಿಗಸ್ 10 ರನ್ ಗಳಿಗೆ ಸೀಮಿತರಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವೈಫಲ್ಯ ಮುಂದುವರಿಯಿತು. ದೀಪ್ತಿ ಶರ್ಮಾ ಹಾಗೂ ವೇದಾ ಕೃಷ್ಣಮೂರ್ತಿ ಕೂಡ ಕಿವೀಸ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು.
ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿದ ಶಿಖಾ ಪಾಂಡೆ ಹಾಗೂ ರಾಧ ಯಾದವ್ ಅವರು ಕ್ರಮವಾಗಿ 10 ಮತ್ತು 14 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ರೋಸ್ಮೇರಿ ಮೈರ್ ಮತ್ತು ಅಮೇಲಿಯಾ ಕೆರ್ ತಲಾ ಎರಡು ವಿಕೆಟ್ ಪಡೆದರು. ಲೀ ತಹುಹಾ, ಸೋಫಿಯಾ ಡಿವೈನ್ ಮತ್ತು ಲೆಹ್ ಕಸ್ಪ್ರೆಕ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್ ಗಳಿಗೆ 133/8 (ಶಫಾಲಿ ವರ್ಮಾ 46, ತಾನಿಯಾ ಭಾಟಿಯಾ 23; ರೋಸ್ಮೇರಿ ಮೈರ್ 27 ಕ್ಕೆ 2, ಅಮೇಲಿಯಾ ಕೆರ್ 21 ಕ್ಕೆ 2)
ನ್ಯೂಜಿಲೆಂಡ್: 20 ಓವರ್ ಗಳಿಗೆ 129/6 (ಅಮೇಲಿಯಾ ಕೆರ್ ಔಟಾಗದೆ 34, ಕ್ಯಾಟಿ ಮಾರ್ಟಿನ್ 25, ಮ್ಯಾಡಿ ಗ್ರೀನ್ 24; ಶಿಖಾ ಪಾಂಡೆ 21 ಕ್ಕೆ 1, ರಾಜೇಶ್ವರಿ ಗಾಯಕ್ವಾಡ್ 22 ಕ್ಕೆ 1)