ನಗರಿ ಭಾಗದಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶದಿಂದ ರೈತರು ಕಂಗಾಲು

ನಗರಿ ಭಾಗದಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶದಿಂದ ರೈತರು ಕಂಗಾಲು Wild elephants in urban areas: Farmers in distress due to crop destruction

ದಾಂಡೇಲಿ  29 : ಆನೆಗಳ ದಾಳಿ ಹೆಚ್ಚಳದಿಂದ ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.ಜೋಯಡಾ ತಾಲೂಕಿನ ನಗರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ತೋಟ ಹಾಗೂ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸುತ್ತಿವೆ. ರಾತ್ರಿ ವೇಳೆ ಗ್ರಾಮಗಳ ಅಂಚಿನಲ್ಲಿರುವ ಕೃಷಿ ಜಮೀನುಗಳಿಗೆ ಬರುತ್ತಿರುವ ಆನೆಗಳ ಹಿಂಡು ಬಾಳೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ತುಳಿದು ಹಾನಿಗೊಳಿಸುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಆನೆಗಳ ದಾಳಿಯಿಂದ ರೈತರು ಅಪಾರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.  

ಬೆಳೆ ಕೊಯ್ಲಿನ ಹಂತದಲ್ಲಿದ್ದ ಬಾಳೆ ಮತ್ತು ಅಡಿಕೆ ತೋಟಗಳು ಹಾನಿಗೊಳಗಾಗಿರುವುದರಿಂದ ವರ್ಷಪೂರ್ತಿ ಮಾಡಿದ ಶ್ರಮ ನೀರಿನಲ್ಲಿ ಹೋದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಆನೆಗಳು ಗ್ರಾಮಗಳತ್ತ ಬರುತ್ತಿರುವುದರಿಂದ ರೈತರು ಜಮೀನುಗಳಲ್ಲಿ ಕಾವಲು ಕಾಯುವ ಅನಿವಾರ್ಯತೆ ಎದುರಾಗಿದೆ. ಇದರಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜೀವಭದ್ರತೆಯ ಆತಂಕವೂ ಹೆಚ್ಚಿದೆ. ಮಕ್ಕಳು ಹಾಗೂ ಮಹಿಳೆಯರು ರಾತ್ರಿ ಹೊರಗೆ ಸಂಚರಿಸಲು ಹೆದರುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.