ದೇಶದ ವಿಷಯ ಬಂದಾಗ ಭಾರತೀಯ ಎನ್ನುವುದನ್ನು ಮರೆಯದಿರು: ಬಡಿಗೇರ

ದೇಶದ ವಿಷಯ ಬಂದಾಗ ಭಾರತೀಯ ಎನ್ನುವುದನ್ನು ಮರೆಯದಿರು: ಬಡಿಗೇರ When it comes to the country, don't forget to be Indian: Badigera

ವಿಜಯಪುರ 16:ನೀನು ಏನಾದರು ಆಗಿರು ಆದರೆ ದೇಶ ಸೇವೆ ಎನ್ನುವ ಮಾತು ಬಂದಾಗ ನೀನೊಬ್ಬ ಭಾರತೀಯ ಎನ್ನುವುದನ್ನು ಮಾತ್ರ ಮರೆಯದಿರು ಎಂದು ರಾಜಭವನದ ನಿವೃತ್ತ ಜಂಟೀ ಕಮಿಷನರ್ ಅಣ್ಣಾಸಾಹೇಬ ಬಡಿಗೇರ ಹೇಳಿದರು. 

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದ ಅವರು; ಭಾರತ ದೇಶಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟೀಷ್ ಈಸ್ಟ್‌ ಇಂಡಿಯಾ ಕಂಪನಿಯು ಪ್ಲಾಸಿ ಕದನದ ನಂತರ ದೇಶವನ್ನು ಆಳುವುದಕ್ಕೆ ಮುಂದಾದರು. ಅಲ್ಲಿಂದ ಪ್ರಾರಂಭಗೊಂಡು 1947ರ ವರೆಗೆ ನಡೆದ ಅನೇಕ ಹೋರಾಟ ಹಾಗೂ ತ್ಯಾಗ ಬಲಿದಾನಗಳ ಫಲವಾಗಿ ಈ ಸ್ವಾತಂತ್ರ್ಯ ಲಭಿಸಿದೆ. ಇಂದು ಭಾರತ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದರೂ ಸಹ ಸುತ್ತಮುತ್ತಲೂ ಶತ್ರುಗಳು ನಮ್ಮನ್ನು ಹಿಂದೆ ಎಳೆಯುವುದಕ್ಕೆ ಹೊಂಚು ಹಾಕುತ್ತಿದ್ದಾರೆ. ಅವರನ್ನು ಹತ್ತಿಕ್ಕುವ ಕಾರ್ಯವನ್ನು ಭಾರತೀಯ ಸೈನ್ಯ ಮಾಡುತ್ತಿದ್ದು ಯುವಕರು ಈ ದೇಶದ ವಿಚಾರಕ್ಕೆ ಬಂದಾಗ ದೇಶವೇ ಮೊದಲು ಮಿಕ್ಕಿದ್ದೆಲ್ಲ ನಂತರ ಎನ್ನುವ ಮಟ್ಟದಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜಗತ್ತಿನಲ್ಲಿಯೇ ಭಾರತ ಮತ್ತಷ್ಟು ಬಲಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತದೆ ಎಂದು ಹೇಳಿದರು. 

ಮಹಾನಗರ ಪಾಲಿಕೆಯ 35ನೇ ವಾರ್ಡಿನ ಸದಸ್ಯ ರಾಜಶೇಖರ ಕುರಿಯವರ ಮುಖ್ಯ ಅಥಿತಿಯಾಗಿ ಪಾಲ್ಗೊಂಡು; ಭಾರತದ ಇತಿಹಾಸವನ್ನು ಅರ್ಥ ಮಾಡಿಕೊಂಡರೆ ಮಾತ್ರ ಭಾರತದ ಭವಿಷ್ಯ ನಮ್ಮ ಕಣ್ಣೇದುರಿಗೆ ಬರುವುದಕ್ಕೆ ಸಾಧ್ಯ. ಇಂದಿನ ಯುವಕರು ದೇಶಭಕ್ತಿಯನ್ನು ಮನದಲ್ಲಿ ತುಂಬಿಕೊಂಡು ಯುವ ಭಾರತದಿಂದ ನವ ಭಾರತ ನಿರ್ಮಾಣ ಮಾಡುವುದರ ಜೊತೆಗೆ ವಿಶ್ವಗುರು ಭಾರತವನ್ನು ಸ್ಥಾಪಿಸುವ ಗುರಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ವರಸಿದ್ಧಿ ವಿನಾಯಕ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂಜಯ ಪಾಟೀಲ್ ಮಾತನಾಡಿ; ಒಂದು ಕಾಲದಲ್ಲಿ ಜನರು ಜನಪ್ರತಿನಿಧಿಗಳಿಗೆ ನಮ್ಮ ಮನೆಗೊಂದು ಟೆಲಿಫೊನ್ ಲೈನ್ ಹಾಕಿಸಿಕೊಡಿ, ಗ್ಯಾಸ್ ಕನೆಕ್ಷನ್ ಕೊಡಿಸಿ ಎಂದು ಕೇಳುತ್ತಿದ್ದರು. ಆದರೆ ಈಗ ಅಂಗೈಯಲ್ಲಿಯೇ ವಿಶ್ವವನ್ನಿಟ್ಟುಕೊಂಡು ತಿರುಗಾಡುವ ಮಟ್ಟದಲ್ಲಿ ಕಾಲ ಬದಲಾಗಿದೆ. ಬದಲಾವಣೆಗೆ ತಕ್ಕಂತೆ ವಿದ್ಯಾರ್ಥಿಗಳು ಸಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ಹೊಸ ಜಗತ್ತು ನಿರ್ಮಾಣವಾಗುತ್ತಿದ್ದು ಅದರ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಸ್ವಾತಂತ್ರ್ಯ ಬಂದಾಗಿದ್ದ ಭಾರತ ಪ್ರಸ್ತುತ ಗಣನೀಯವಾಗಿ ಬದಲಾವಣೆ ಹೊಂದುತ್ತ ಸಾಗಿದೆ. ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ತನ್ನ ಸಿಂಹಪಾಲನ್ನು ಹೊಂದಿದ್ದರೆ; ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ರಾಷ್ಟ್ರಗಳಿಗೂ ಸಹ ಉತ್ತರ ನೀಡುವ ಮಟ್ಟದಲ್ಲಿ ಸಜ್ಜಾಗಿ ನಿಂತಿದೆ. ಅದರ ಜೊತೆಯಲ್ಲಿ ವಿಜ್ಞಾನ ಕ್ಷೇತ್ರವೂ ಸಹ ಮಹತ್ತರವಾದ ಪ್ರಗತಿ ಸಾಧಿಸಿದೆ. ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ತಮ್ಮ ಕೊಡುಗೆಯನ್ನು ಕೊಡುವುದಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು. 

ಪ್ರಾಚಾರ್ಯ ಶ್ರೀಕಾಂತ ಕೆ. ಎಸ್, ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ, ಉಪನ್ಯಾಸಕ ಮುಸ್ತಾಕ ಮಲಘಾಣ, ವಿದ್ಯಾರ್ಥಿಗಳಾದ ಗಂಗಾ ಮುಕರ್ತಿಹಾಳ, ಮಧುಗೌಡ ಪಾಟೀಲ, ಕೃತಿಕಾ ಕಣಬುರ ಮಾತನಾಡಿದರು. ಚಿನ್ಮಯಿ ಸಂಪಗಾಂವಕರ್ ಪ್ರಾರ್ಥಿಸಿದರು. ಉಪನ್ಯಾಸಕ ಶರಣಗೌಡ ಪಾಟೀಲ ನಿರೂಪಿಸಿದರು.