ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರದ ಕೋವಿಡ್ ನೆರವನ್ನು ಬಳಸಿಕೊಳ್ಳುತ್ತಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ, ಜೂ 29: ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಾಪ್ರಹಾರ ನಡೆಸಿದ್ದಾರೆ. ದೆಹಲಿಯಿಂದ ಭಾನುವಾರ ವರ್ಚುಯಲ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-೧೯ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿರುವ ನೆರವನ್ನು ಪಶ್ಚಿಮ ಬಂಗಾಳ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ್ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ, ವಲಸೆ ಕಾರ್ಮಿಕರ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ವಲಸಿಗರನ್ನು ಸರ್ಕಾರ ಸಂಪೊರ್ಣವಾಗಿ ನಿರ್ಲಕ್ಷಿಸಿದೆ ಎಂದಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ವಸ್ತುಸ್ಥಿತಿ ಕುರಿತು ಕೇಂದ್ರ ತಂಡ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸಲಿದೆ. ಕೇಂದ್ರದ ಜನಪರ ನೀತಿ ಮತ್ತು ಕಾರ್ಯಕ್ರಮಗಳನ್ನು ಟಿಎಂಸಿ ಸರ್ಕಾರ ವಿರೋಧಿಸುತ್ತಿದ್ದು, ಈ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ಇದು ಜನ ವಿರೋಧಿ ಸರ್ಕಾರ ಎಂದು ಟೀಕಿಸಿದ್ದಾರೆ.