ವಿಶ್ವಕರ್ಮ ಸಮಾಜದ ಕೊಡುಗೆ ದೇಶಕ್ಕೆ ಅಪಾರ: ಚಿತ್ರ ಕಲಾವಿದ ಕಾಳಪ್ಪ ಬಡಿಗೇರ

ವಿಶ್ವಕರ್ಮ ಸಮಾಜದ ಕೊಡುಗೆ ದೇಶಕ್ಕೆ ಅಪಾರ: ಚಿತ್ರ ಕಲಾವಿದ ಕಾಳಪ್ಪ ಬಡಿಗೇರ Vishwakarma Samaj's contribution to the country is immense: Film artist Kalappa Badigera


ಬೆಳಗಾವಿ, ಜ.01: ವಿಶ್ವಕರ್ಮ ಸಮಾಜದ ಕಾರ್ಯದಿಂದಾಗಿ ವಿದೇಶದ ಜನರನ್ನು ಆಕರ್ಷಿಸುವ ಶಿಲ್ಪಕಲೆಗಳು ಭಾರತ ದೇಶದಲ್ಲಿವೆ. ವಿಶ್ವ ಕರ್ಮರು ಮಾಡಿದ ಶಿಲ್ಪಕಲೆಗಳಿಂದಾಗಿ ಎಲ್ಲರ ಗಮನ ಸೆಳೆಯುವ ಮೂರ್ತಿಗಳು ಮತ್ತು ಸ್ಮಾರಕಗಳು ನಮ್ಮ ದೇಶದಲ್ಲಿವೆ ಎಂದು ಚಿತ್ರ ಕಲಾವಿದ ಕಾಳಪ್ಪ ಬಡಿಗೇರ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಜ.01) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಾಳಪ್ಪ ಬಡಿಗೇರ ಅವರು ಮಾತನಾಡಿ ಅಮರ ಶಿಲ್ಪಿ ಜಕಣಾಚಾರಿಗಳು ವಿಶ್ವಕರ್ಮ ಸಮಾಜದ ಕಿರಿಟ. ಜಕಣಾಚಾರಿಗಳು ನಿರ್ಮಿಸಿದಂತಹ ಶಿಲ್ಪಕಲೆಗಳಿಂದಾಗಿ ಭಾರತದ ಗರಿಮೆ ಉತ್ತುಂಗಕ್ಕೇರಿದೆ. ನಮ್ಮ ದೇಶದ ಶಿಲ್ಪಕಲೆಗಳ ಬಗ್ಗೆ ವಿದೇಶಿಗರು ಬಂದು ಆಧ್ಯಯನ ಮಾಡುತ್ತಿದ್ದಾರೆ. ಭಾರತದ ವಾಸ್ತುಶಿಲ್ಪ ಬಹಳ ಅತ್ಯುತ್ತಮವಾಗಿದೆ, ಅದರಲ್ಲಿಯು ಕರ್ನಾಟಕದ ವಾಸ್ತುಶಿಲ್ಪ ತುಂಬಾ ಶ್ರೇಷ್ಠವಾದದ್ದು. 

ಬೇಲೂರು, ಹಳೆಬೀಡು ಸೇರಿದಂತೆ ಹಲವಾರು ಸ್ಥಳಗಳಲ್ಲಿ ಜಕಣಾಚಾರಿಗಳು ರೂಪಿಸಿದಂತಹ ದೇವಸ್ಥಾನ, ಮೂರ್ತಿಗಳು ಮತ್ತು ಶಿಲ್ಪಕಲೆಗಳು ನಮಗೆ ಕಂಡು ಬರುತ್ತವೆ. ಬೇಲೂರಿನಲ್ಲಿ ಜಗತ್ಪ್ರಸಿದ್ಧ ಚನ್ನಕೇಶವನ ಮೂರ್ತಿ ಕೆತ್ತನೆಯನ್ನು ಅಮರ ಶಿಲ್ಪಿ ಜಕಣಾಚಾರಿಗಳು ನಿರ್ಮಿಸಿದ್ದಾರೆ. 

ಜಗತ್ತಿನ ಅತ್ಯಂತ ಎತ್ತರದ ಮೂರ್ತಿ ಸರದಾರ ವಲ್ಲಭಭಾಯಿ ಪಟೇಲ್ ರವರ ಮೂರ್ತಿ, ದೇವನಹಳ್ಳಿಯಲ್ಲಿನ ಕೆಂಪೇಗೌಡರ ಮೂರ್ತಿ ಮತ್ತು ಅಯೋಧ್ಯೆಯಲ್ಲಿನ ಬಾಲ ರಾಮನ ಮೂರ್ತಿ ಸೇರಿದಂತೆ ದೇಶದಲ್ಲಿ ಹಲವಾರಿ ಮೂರ್ತಿಗಳನ್ನು ವಿಶ್ವಕರ್ಮ ಸಮಾಜದ ಶಿಲ್ಪಕಾರರು ನಿರ್ಮಿಸಿದ್ದಾರೆ. 

ವಿಶ್ವಕರ್ಮ ಸಮಾಜ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಸಮಾಜದ ಜನ ಇನ್ನು ಜಾಗೃತರಾಗಿ ಸಮಾಜವನ್ನು ಸದೃಢವಾಗಿ ನಿರ್ಮಿಸಬೇಕು. ಪ್ರಸ್ತುತದಲ್ಲಿ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ವಿಶ್ವಕರ್ಮ ಸಮಾಜ ಕಾರಣವಾಗಿದೆ ಎಂದು ಕಾಳಪ್ಪ ಬಡಿಗೇರ ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಜ್ಞಾನೇಶ್ವರ ಬಡಿಗೇರ, ಅಶೋಕ ಸಾತಗಾಂವ, ರಮೇಶ ದೇಶಮುಖ, ಸಿದ್ಧಾರ್ಥ ಸುತಾರ, ಪೂರ್ಣಿಮಾ ಪತ್ತಾರ,ಅರ್ಚನಾ ಪತ್ತಾರ, ರೇಖಾ ಸುತಾರ, ರಮೇಶ ದೇಸೂರಕರ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿದ್ದರು.