ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ; ಡಾ. ಎಫ್‌.ಜಿ. ಹಳಕಟ್ಟಿಯವರ ಜಯಂತಿ ಆಚರಣೆ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ; ಡಾ. ಎಫ್‌.ಜಿ. ಹಳಕಟ್ಟಿಯವರ ಜಯಂತಿ ಆಚರಣೆ Vachana Literature Preservation Day; Celebration of Dr. F.G. Halakatti's Birth Anniversary

  ಹಾವೇರಿ, ಜು. 4: ನಗರದ ಬಸವಕೇಂದ್ರ ಹೊಸಮಠದಲ್ಲಿ ಶರಣ ಸಂಗಮ ಹಾಗೂ ವಚನ ಪಿತಾಮಹ ಡಾ. ಎಫ್‌.ಜಿ. ಹಳಕಟ್ಟಿಯವರ ಜಯಂತಿ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು.  

ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಾ. ಹಳಕಟ್ಟಿಯವರು ತಮ್ಮ ಜೀವನವನ್ನೇ ಸಮರ​‍್ಿಸಿಕೊಂಡ ಮಹನೀಯರು ಎಂದು ಹೇಳಿದರು. ಮನೆ, ಮಠ ಹಾಗೂ ಜಗುಲಿಗಳಲ್ಲಿ ಪೂಜಿಸಲ್ಪಡುತ್ತಿದ್ದ ತಾಳೆಓಲೆಗಳನ್ನು ಸಂಗ್ರಹಿಸಿ, ಅವುಗಳ ಅರ್ಥವನ್ನು ವಿವರಿಸಿ, ವಚನಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸಿದ ಅವರ ಸೇವೆ ಅನನ್ಯವಾಗಿದೆ ಎಂದರು.  

1925ರಲ್ಲಿ ಮುದ್ರಣಾಲಯ ಆರಂಭಿಸಲು ಆರ್ಥಿಕ ಸಂಕಷ್ಟ ಎದುರಾದಾಗ ತಮ್ಮ ಮನೆಯನ್ನೇ ಮಾರಾಟ ಮಾಡಿ, ಬಾಡಿಗೆ ಮನೆಯಲ್ಲಿ ವಾಸವಿದ್ದು ‘ಶಿವಾನುಭವ’ ಪತ್ರಿಕೆಯನ್ನು ಆರಂಭಿಸಿದರು. ಸುಮಾರು 35 ವರ್ಷಗಳ ಕಾಲ ಅದನ್ನು ನಿರಂತರವಾಗಿ ಪ್ರಕಟಿಸಿ ಪತ್ರಿಕೋದ್ಯಮದಲ್ಲೂ ಹೊಸ ಇತಿಹಾಸ ನಿರ್ಮಿಸಿದರು ಎಂದು ಸ್ಮರಿಸಿದರು.  

ಸಹಾಯಕ ಪ್ರಾಧ್ಯಾಪಕ ಡಾ. ಶವಂತಕುಮಾರ ಕೆ.ಎಸ್‌. ಉಪನ್ಯಾಸ ನೀಡಿ, ಅನುಭವ ಮಂಟಪದ ಪರಿಕಲ್ಪನೆ ಹಾಗೂ ವಚನ ಸಾಹಿತ್ಯದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಜಿ.ಜಿ. ಹೊಟ್ಟೆಗೌಡರ, ಡಾ. ಜಗದೀಶ ಮಹಾರಾಜ ಪೇಟೆ, ಪರಶುರಾಮ ಹಳ್ಳಾಪೂರ, ಮಲ್ಲಿಕಾರ್ಜುನ ಹಿಂಚಗೇರಿ, ಕಮಲ ಬುಕ್ ಶೆಟ್ಟಿ ಶಿವಶಂಕರ ಹೆರೂರ, ಮೃತ್ಯುಂಜಯ ಮುಷ್ಟಿ, ರೇಣುಕಾ ಗುಡಿಮನಿ, ಗೋಳಪ್ಪ ಹಳಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಕ್ಕನ ಬಳಗದ ಮಹಿಳೆಯರು ವಚನ ಪ್ರಾರ್ಥನೆ ನಡೆಸಿದರು.