ರಂಗೋಲಿಯಲ್ಲಿ ರಾಷ್ಟ್ರಭಕ್ತಿ ಅನಾವರಣ

  ರಂಗೋಲಿಯಲ್ಲಿ ರಾಷ್ಟ್ರಭಕ್ತಿ ಅನಾವರಣ  Unveiling patriotism through Rangoli

ಲೋಕದರ್ಶನ ವರದಿ 

ಮಹಾಲಿಂಗಪುರ  20:  ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಗ್ರಾಮೀಣ ಘಟಕದ ಮಹಿಳಾ ಮೋರ್ಚಾ ವತಿಯಿಂದ ‘ಸೇವಾ ಸಂಕಲ್ಪ   ರಾಷ್ಟ್ರ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  

 ನಗರದ ನಡುಚೌಕಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ನೇಹಲ್ ಅಂಗಡಿ ನೇತೃತ್ವದಲ್ಲಿ ಕಾರ್ಯಕರ್ತೆಯರು ವಿವಿಧ ಬಣ್ಣಗಳ ಮೂಲಕ ದೇಶಭಕ್ತಿ, ರಾಷ್ಟ್ರದ ಏಕತೆ, ಅಭಿವೃದ್ಧಿ ಹಾಗೂ ಸೇವಾ ಮನೋಭಾವವನ್ನು ಬಿಂಬಿಸುವ ಆಕರ್ಷಕ ರಂಗೋಲಿಗಳನ್ನು ಬಿಡಿಸಿದರು.  

 ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಭಾರತದ ಪ್ರಧಾನಿಯಾಗಿ ಒಟ್ಟು 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ದೇಶ ಸೇವೆ ಸಲ್ಲಿಸಿದ್ದಾರೆ. ಅವರ ಆಡಳಿತದಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನಮಾನ ಗಳಿಸಿದೆ ಎಂದು ಹೇಳಿದರು.  

 ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಹಾಗೂ ಡಿಜಿಟಲ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳು ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿವೆ. ದೇಶದ ಭದ್ರತೆ ಮತ್ತು ಸ್ವಾಭಿಮಾನಕ್ಕೆ ಆದ್ಯತೆ ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ಅವರು ಹೇಳಿದರು.  

 ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಕೇವಲ ಹುಟ್ಟುಹಬ್ಬದ ಆಚರಣೆಗೆ ಸೀಮಿತಗೊಳಿಸದೆ, ಇಡೀ ತಿಂಗಳು ‘ಸೇವಾ ಸಂಕಲ್ಪ’ದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂದು ಸವದಿ ಕರೆ ನೀಡಿದರು.  

 ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶೇಖರ ಅಂಗಡಿ, ಶಿವಾನಂದ ಅಂಗಡಿ, ಮಲ್ಲು ದಲಾಲ, ವಿಜಯ ಸಬಕಾಳೆ, ತಿಪ್ಪಣ್ಣ ಬಂಡಿವಡ್ಡರ, ಮಹಾದೇವ ಸಾವಂತ, ಮಹೇಶ ಜಿಡ್ಡಿಮನಿ, ಅಜಯ ಹಂದ್ರಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.