ಸಾಹಿತ್ಯದ ಮೂಲಕ ಸಮಾಜದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಿ: ಅಕಾಡೆಮಿ ಅಧ್ಯಕ್ಷ ಮುಕುಂದರಾಜ್

ಸಾಹಿತ್ಯದ ಮೂಲಕ ಸಮಾಜದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಿ: ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ Understand the nuances of society through literature: Academy President Mukundaraj

 ಶಿಗ್ಗಾಂವಿ, ಜು.12: ಯುವ ಕವಿಗಳು ಕೇವಲ ಪ್ರೇಮ-ಪ್ರಣಯ ಕವನಗಳಿಗೆ ಸೀಮಿತವಾಗದೆ, ದೇಶ ಮತ್ತು ಸಮಾಜದ ಸಮಸ್ಯೆಗಳ ಕುರಿತು ಸಾಹಿತ್ಯ ರಚನೆ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಸಮಾಜದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್ ಹೇಳಿದರು.  

ತಾಲೂಕಿನ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ನಲ್ಲಿ ಉತ್ತರ ಸಾಹಿತ್ಯ ವೇದಿಕೆ ಹಬಸೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಉತ್ಸವ ರಾಕ್ ಗಾರ್ಡನ್ ಆಶ್ರಯದಲ್ಲಿ ಆಯೋಜಿಸಿದ್ದ ಕಲಾಗುರು ಡಾ. ಟಿ.ಬಿ. ಸೋಲಬಕ್ಕನವರ್ ಅವರ ಜನ್ಮದಿನ ಸ್ಮರಣಾರ್ಥ ‘ಕನಕ-ಶರೀಫ್ ಕಾವ್ಯ ಪ್ರಶಸ್ತಿ’ ಹಾಗೂ ‘ಕಾವ್ಯ ಗಜಲ್ ಗೋಷ್ಠಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವ ಸಂಬಂಧಗಳ ಸೂಕ್ಷ್ಮತೆಗಳು ಅಡಗಿವೆ. ಮಾನವನು ಹೇಗೆ ಬದುಕಬೇಕು ಎಂಬುದನ್ನು ನಮ್ಮ ಕವಿಗಳು ಸಾಹಿತ್ಯದ ಮೂಲಕ ಅನೇಕ ವರ್ಷಗಳಿಂದ ಬೋಧಿಸುತ್ತಾ ಬಂದಿದ್ದಾರೆ. ಇಂದಿನ ಕವಿಗಳು ಕೇವಲ ಸಾಹಿತ್ಯಿಕರಾಗದೇ, ಸಮಾಜದ ನೈಜ ಸಮಸ್ಯೆಗಳನ್ನು ಬಿಂಬಿಸುವ ಸಾಂಸ್ಕೃತಿಕ ಸೈನಿಕರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.  

ಯುವಕರು ಸುಖದ ಜೀವನಕ್ಕಾಗಿ ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗಗಳತ್ತ ಮುಖ ಮಾಡಿದರೆ, ನಮ್ಮ ಜಾನಪದ ಸಂಸ್ಕೃತಿ ಮತ್ತು ಪರಂಪರೆ ನಾಶವಾಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.  

ಉತ್ಸವ ರಾಕ್ ಗಾರ್ಡನ್ ಕ್ಯುರೇಟರ್ ಹಾಗೂ ಸಾಹಿತಿ ವೇದಾರಾಣಿ ದಾಸನೂರು ಮಾತನಾಡಿ, ಕಲಾಗುರು ಡಾ. ಟಿ.ಬಿ. ಸೋಲಬಕ್ಕನವರ್ ಅವರು ಜಾನಪದದ ಸಮಷ್ಟಿ ಭಾವನೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಧಾರವಾಡದ ಚನ್ನಪ್ಪ ಅಂಗಡಿ, ಗಂಗಾವತಿಯ ಜಾಜಿ ದೇವೇಂದ್ರ​‍್ಪ, ಗದಗದ ಎ.ಎಸ್‌. ಮಕಾನದಾರ ಹಾಗೂ ಮಂಡ್ಯದ ಮಂಜುಳಾ ಕಿರುಗಾಳ ಅವರಿಗೆ ‘ಕನಕ-ಶರೀಫ್ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎರಡು ದಿನಗಳ ಕಾವ್ಯ-ಗಜಲ್ ಗೋಷ್ಠಿಗೂ ಚಾಲನೆ ನೀಡಲಾಯಿತು.  

ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮಮತಾ ಸಾಗರ ಪ್ರಶಸ್ತಿ ಪ್ರದಾನ ಮಾಡಿದರು. ದಾಸನೂರು ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರಕಾಶ ದಾಸನೂರು, ಸಾಹಿತಿಗಳಾದ ಹೃದಯಶಿವ, ಡಾ. ರಾಜಶೇಖರ ಮಠಪತಿ, ಬಿ. ಪೀರಭಾಷಾ, ಮಂಜುನಾಥ ಚಾಂದ್, ಮಮತಾ ಅರಸಿಕೇರಿ, ಡಾ. ಮಲ್ಲಿಕಾರ್ಜುನ ಮಾಣ್ಣಡೆ, ಹಬಸೂರು ರಂಜಾನ್, ದೀಪಾ ಗೋಣಾಳ, ಡಾ. ಜಯದೇವ ಗಾಯಕ್ವಾಡ್, ಶರೀಫ್ ಮಾಕಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.