ಅವಿಶ್ವಾವಸು ಸಂವತ್ಸರದ ಪ್ರಾರಂಭೋತ್ಸವರಂಗಸಂಪದವರಿಂದ ಎರಡು ನಾಟಕಗಳ ಪ್ರದರ್ಶನ
ಬೆಳಗಾವಿ 19: ನಗರದ ರಂಗಸಂಪದದವರು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದರ (ಹಳೆ ರೀಝ ಟಾಕೀಜ್) ದಲ್ಲಿ ವಿಶ್ವಾವಸು ಸಂವತ್ಸರದ ರಂಗ ಪ್ರಾರಂಭೋತ್ಸವ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿರಿಗೆರೆಯ ಧಾತ್ರಿ ರಂಗ ತಂಡದವರಿಂದ ಎರಡು ನಾಟಕಗಳು ಪ್ರದರ್ಶನಗೊಂಡವು.
ದಿ.17 ಶನಿವಾರದಂದು ಸಾಯಂಕಾಲ 6-30 ಕ್ಕೆ ಶ್ರೀ ಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ವಿ. ಎನ್. ಅಶ್ವತ್ಥ ಅವರು ರಚಿಸಿದ್ದು ದಾವಣಗೆರೆಯ ಭೀಮೇಶ ಎಚ್. ಎನ್. ಅವರ ನಿರ್ದೇಶನವಿತ್ತು. ದಿ. 18 ರವಿವಾರ ಸಾ. 6-30 ಕ್ಕೆ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ರಚಿಸಿದ್ದು ಜಗದೀಶ ಆರ್. ಜಾಣೆಯವರ ನಿರ್ದೇಶನವಿತ್ತು.
ಉತ್ಸವವನ್ನು ಕಾರಂಜಿಮಠದ ಪ.ಪೂ. ಗುರುಸಿದ್ಧ ಮಹಾಸ್ವಾಮೀಜಿಯವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಅವರು ಮಾತನಾಡುತ್ತ ವಿಶ್ವಾವಸು ಸಂವತ್ಸರದ ರಂಗ ಪ್ರಾರಂಭೋತ್ಸವದ ಮೊದಲ ನಾಟಕವಾಗಿ ‘ಕೃಷ್ಣ ಸಂಧಾನ’ ಪ್ರದರ್ಶನಗೊಂಡಿತು. ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಈ ನಾಟಕ ವರ್ಷವಿಡಿ ನಗುತ್ತಲೇ ಇರಬೇಕೆಂಬ ಸಂದೇಶವನ್ನು ನೀಡಿದೆ ಅದರಂತೆ ಎರಡನೇ ದಿನವಾದ ‘ಮೋಳಿಗೆ ಮಾರಯ್ಯ’ ನಾಟಕ ಶರಣ ದಂಪತಿಗಳ ಭಕ್ತಿಪ್ರಧಾನ ನಾಟಕವಾಗಿತ್ತು. ವಿಶೇಷವೆಂದರೆ ನಗೆನಾಟಕವನ್ನಾಡಿ ಹೊಟ್ಟೆ ಹುಣ್ಣಾಗಿಸಿದ ಕಲಾವಿದರೇ ಇಂದು ಭಕ್ತಿ ಪ್ರಧಾನ ಗಂಭೀರ ನಾಟಕವನ್ನೂ ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿ ಕಲಾ ನೈಪುಣ್ಯವನ್ನು ಮೆರೆದಿದ್ದಾರೆ ಎಂದು ಹೇಳಿ ಕಲಾವಿದರನ್ನು ಅಭಿನಂದಿಸಿದರು.
ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ರಂಗಭೂಮಿ ಕಲಾವಿದರು ಓದಿ ಕಲಿಯುವದಕ್ಕಿಂತ ನೋಡಿ ಕಲಿಯುವುದು ಬಹಳಷ್ಟಿದೆ. ಪ್ರತಿಯೊಂದು ವಿಷಯವನ್ನು ಗಮನಿಸುತ್ತಿರಬೇಕು. ಗಮನಿಸಿದ ವಿಷಯವನ್ನು ಮನದಲ್ಲಿಟ್ಟುಕೊಂಡು ಅಭಿನಯದಲ್ಲಿ ಉಪಯೋಗಿಸಿಕೊಳ್ಳಬೇಕು. ಈ ಅಂಶವನ್ನು ಸಿರಿಗೆರೆಯ ಧಾತ್ರಿ ರಂಗ ತಂಡದವರು ತಮ್ಮ ಅಭಿನಯದಲ್ಲಿ ಅಳವಡಿಸಿಕೊಂಡಿದ್ದಾರೆ. ಎಲ್ಲ ಕಲಾವಿದರೂ ತಮ್ಮ ತಮ್ಮ ಪಾತ್ರಗಳಿಗೂ ನ್ಯಾಯವನ್ನೊದಗಿಸಿಕೊಟ್ಟಿದ್ದಾರೆ. ಆ ತಂಡಕ್ಕೆ, ಅವರಲ್ಲಿರುವ ಕಲೆಗೆ ನಾನು ತಲೆ ಬಾಗುತ್ತೇನೆ ಎಂದು ತುಂಬ ಭಾವುಕರಾಗಿ ಹೇಳಿದರು.
ಕೊನೆಯಲ್ಲಿ ನಾಟಕಗಳ ಕುರಿತಂತೆ ತಮ್ಮ ತಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ಪ್ರಸಾದ ಕಾರಜೋಳ, ಚಿದಾನಂದ ವಾಳ್ಕೆ, ಆರ್. ವಿ. ಭಟ್, ಅರವಿಂದ ಹುನಗುಂದ, ಎ. ಎಂ. ಕುಲಕರ್ಣಿ, ಜಯಂತ ಜೋಶಿ, ವೀಣಾ ಹೆಗಡೆ, ಡಾ. ನಿರ್ಮಲಾ ಭಟ್ಟಲ, ಎನ್. ಬಿ. ದೇಶಪಾಂಡೆ, ವಿನೋದ ಸಪ್ಪಣ್ಣನವರ ಮುಂತಾದ ರಂಗಾಸಕ್ತರು ಉಪಸ್ಥಿತರಿದ್ದರು.-0-0-0-
ಫೋಟೋ: ಉತ್ಸವವನ್ನು ಕಾರಂಜಿ ಮಠದ ಪ. ಪೂ. ಗುರುಸಿದ್ಧ ಸ್ವಾಮೀಜಿಯವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.