ಕೊಳಾರಿನಲ್ಲಿ ರೈತರ ಮೂರು ಪಂಪ್ಸೆಟ್ ಮೋಟಾರ್ ಕಳವು

ಕೊಳಾರಿನಲ್ಲಿ ರೈತರ ಮೂರು ಪಂಪ್ಸೆಟ್ ಮೋಟಾರ್ ಕಳವು  Three farmers' pumpset motors stolen in Kolar


ಕೊಳಾರ, ಸೆ. 8: ತಾಲೂಕಿನ ಕೊಳಾರ ಪಟ್ಟಣದ ಪೌಜಿ ದಾಬಾ (ಸೈನಿಕ ವೃತ್ತ) ಸಮೀಪದ ಜಮೀನುಗಳಲ್ಲಿ ಅಳವಡಿಸಲಾಗಿದ್ದ ರೈತರ ಮೂರು ವಿದ್ಯುತ್ ಮೋಟಾರ್ ಪಂಪ್ಸೆಟ್ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.  

ಸೆ. 5ರ ಶನಿವಾರ ರಾತ್ರಿ ಕಳ್ಳರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಗುರುಲಿಂಗಪ್ಪ ಸಂಗಪ್ಪ ಗಣಿಯ ಅವರ ಜಮೀನು ಹಾಗೂ ಅಶೋಕ ಸಂಗಪ್ಪ ಉದ್ದಾರ ಅವರ ಜಮೀನಿನಲ್ಲಿದ್ದ ತಲಾ 5 ಎಚ್ಪಿ ಸಾಮರ್ಥ್ಯದ ಪಂಪ್ಸೆಟ್ಗಳು ಹಾಗೂ ಬಸವರಾಜ ಸಿದ್ದಪ್ಪ ಉದ್ದಾರ ಅವರ ಜಮೀನಿನಲ್ಲಿದ್ದ ಜಕ್ಕಪ್ಪ ಕೊಂತಿಕಲ್ಲ ಅವರ 10 ಎಚ್ಪಿ ಸಾಮರ್ಥ್ಯದ ಪಂಪ್ಸೆಟ್ ಮೋಟಾರ್ನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.  

ಭಾನುವಾರ ಬೆಳಿಗ್ಗೆ ರೈತರು ಎಂದಿನಂತೆ ಜಮೀನುಗಳಿಗೆ ತೆರಳಿ ಪರೀಶೀಲಿಸಿದಾಗ ಪಂಪ್ಸೆಟ್ಗಳು ಕಳವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಜಮೀನು ಮಾಲೀಕರು ಸ್ಥಳೀಯ ಕೊಳಾರ ಪೊಲೀಸ್ ಠಾಣೆಗೆ ತೆರಳಿ ಪಿಎಸ್‌ಐ ಅಶೋಕ ನಾಯ್ಕ ಅವರಿಗೆ ಘಟನೆ ಕುರಿತು ದೂರು ನೀಡಿ ಮಾಹಿತಿ ನೀಡಿದ್ದಾರೆ.  

ಒಂದೇ ದಿನ ಮೂರು ಜಮೀನುಗಳಿಂದ ಸರಣಿ ಪಂಪ್ಸೆಟ್ಗಳು ಕಳವಾಗಿರುವುದು ಸುತ್ತಮುತ್ತಲಿನ ರೈತರಲ್ಲಿ ಆತಂಕ ಹಾಗೂ ಭೀತಿ ಮೂಡಿಸಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಗ್ರ ತನಿಖೆ ನಡೆಸಿ, ಕಳ್ಳರನ್ನು ಶೀಘ್ರ ಬಂಧಿಸಬೇಕು ಹಾಗೂ ಕಳುವಾಗಿರುವ ಪಂಪ್ಸೆಟ್ಗಳನ್ನು ಮರಳಿ ಕೊಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.  

ಹೇಳಿಕೆ: “ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಪಂಪ್ಸೆಟ್ ಮೋಟಾರ್ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಳಾರ ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ನಮಗೆ ನ್ಯಾಯ ಒದಗಿಸಬೇಕು,” ಎಂದು ಕೊಳಾರ ಪಟ್ಟಣದ ರೈತ ಅಶೋಕ ಉದ್ದಾರ ಆಗ್ರಹಿಸಿದ್ದಾರೆ.