ಇನ್ನೊಬ್ಬರ ಕಣ್ಣೀರು ಒರೆಸುವವರು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಅವಶ್ಯಕತೆ ಇಲ್ಲ: ಮಹಾಂತ ಪ್ರಭು ಸ್ವಾಮೀಜಿ

 ಇನ್ನೊಬ್ಬರ ಕಣ್ಣೀರು ಒರೆಸುವವರು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಅವಶ್ಯಕತೆ ಇಲ್ಲ: ಮಹಾಂತ ಪ್ರಭು ಸ್ವಾಮೀಜಿ Those who wipe away others' tears do not need to go to the Himalayas and do penance: Mahant Prabhu S

ಲೋಕದರ್ಶನ ವರದಿ 

ಇನ್ನೊಬ್ಬರ ಕಣ್ಣೀರು ಒರೆಸುವವರು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಅವಶ್ಯಕತೆ ಇಲ್ಲ: ಮಹಾಂತ ಪ್ರಭು ಸ್ವಾಮೀಜಿ 

ಮಹಾಲಿಂಗಪುರ 07: ಇನ್ನೊಬ್ಬರ ಕಣ್ಣೀರು ಒರೆಸುವವರು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಅವಶ್ಯಕತೆ ಇಲ್ಲ ಅವರಿದ್ದಲ್ಲಿಯೇ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ, ನಿಸ್ವಾರ್ಥದಿಂದ ನಿತ್ಯ ನಿರಂತರ ನಿರ್ಗತಿಕರು, ಬಡವರು, ಅಂಗವಿಕಲರ ಸೇವೆ ಮಾಡುತ್ತಿರುವ ಸಿ.ಎಂ. ಹುರಕಡ್ಲಿ ಫೌಂಡೇಶನ್ ನ ಚನ್ನಬಸು ಹುರಕಡ್ಲಿ ದಂಪತಿಗಳಿಗೆ ಆ ಭಗವಂತನ ಅನುಗ್ರಹ ಸದಾ ಇರುತ್ತದೆ ಎಂದು ಶೇಗುಣಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮೀಜಿ ಹೇಳಿದರು. 

ಚನ್ನಬಸು ಹುರಕಡ್ಲಿ ಅವರ ತಂದೆ ದಿ.ಮಹಾದೇವಪ್ಪ ತಾಯಿ ದಿ.ಶಾಂತವ್ವ ಇವರ ಸ್ಮರಣಾರ್ಥ ಸಿಎಂ ಹುರಕಡ್ಲಿ ಫೌಂಡೇಶನ್ ವತಿಯಿಂದ ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಅಂಗವಿಕಲರಿಗೆ ಕೃತಕ ಕೈಕಾಲು ಜೋಡಣೆ, ಕ್ಯಾಲಿಪರ್, ಬಗಲು ಬಡಿಗೆ ವಿತರಣೆ,ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ, ಅಗ್ನಿಕರ್ಮ, ವಿದ್ದಕರ್ಮ, ಆಯುರ್ವೇದ ಚಿಕಿತ್ಸೆ, ರಕ್ತದಾನ ಶಿಬಿರ, ದಂತ ಚಿಕಿತ್ಸೆ, ಕಲರ್ ಥೆರಪಿ, ಅಕ್ಯುಪ್ರೆಷರ್ ಶಿಬಿರ, ಕೈಕಾಲು, ಬೆನ್ನು ನೋವಿಗೆ ಮಸಾಜ್ ಚಿಕಿತ್ಸೆ, ಯೋಗ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯರಾದ ನಮಗೆ ನಮ್ಮ ಯೋಗಶಕ್ತಿಯ ಅರಿವಿಲ್ಲ, ಯೋಗ ಗುರುವೊಬ್ಬರ ಪಾರ್ಥಿವ ಶರೀರದ ಮುಖದಲ್ಲಿ 22 ದಿನ ಮಾಸದ ಮಂದಹಾಸ ಕಂಡ ಅಮೇರಿಕಾ ನಮ್ಮ ಯೋಗಕ್ಕೆ ಶರಣಾಗಿದೆ. ಹಣದಿಂದ ನೆಮ್ಮದಿ ಅಸಾಧ್ಯ, ಮೋಹ ಕಡಿಮೆಯಾಗಬೇಕು, ಆಧ್ಯಾತ್ಮದ ಕಡೆ ವಾಲಬೇಕು, ಇನ್ನೊಬ್ಬರ ಕಣ್ಣಲ್ಲಿ ನೀರು ಬರಿಸದಿರುವುದೇ ಸಾರ್ಥಕ ಬದುಕು.ಅಂಗದ ಮೇಲೆ ಲಿಂಗ ಹಿಡಿದು ಜಂಗಮ ಸಮಾಜದ ಸೇವೆ ಮರೆತರೆ ವ್ಯರ್ಥ, ಅದೇ ರೀತಿ ಇಂದು ಸಮಾಜ ಸೇವೆ ಮಾಡುತ್ತಿರುವ ಹುರಕಡ್ಲಿಯವರ ಸೇವಾ ಕಾರ್ಯ ಅವರ್ಣನೀಯ, ಮಾದರಿ ಎಂದರು. 

ಹಳೆ ಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠೇಶ್ವರ ಮಠದ ಶಿವಶಂಕರ ಮಹಾಸ್ವಾಮಿ ಮಾತನಾಡಿ, ಸಿಎಂ ಖುರ್ಚಿಗಾಗಿ ನಡೆಯುತ್ತಿರುವ ರಾಜಕೀಯ ದಂಗಲ್ ಗಿಂತ ನಮ್ಮ ಸಿಎಂ ಹುರಕಡ್ಲಿ ಅವರ ಧರ್ಮದಂಗಲ್ ಶ್ರೇಷ್ಠ. ಯಾವುದೇ ಮಠಮಾನ್ಯಗಳು ಮಾಡದ ಸೇವೆ ಮಾಡುತ್ತಿದ್ದಾರೆ, ಅವರ ಸೇವೆ ಯಾವುದೇ ಮಲ್ಟಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಗಿಂತ ಮಿಗಿಲು ಎಂದರು. ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಹುರಕಡ್ಲಿ ಅವರಿಗೆ ಸಮಾಜ ಸೇವೆ ರಕ್ತಗತವಾಗಿ ಬಂದಿದೆ, ಅವರ ಸೇವೆ ಶಾಶ್ವತ ಎಂದರು.ಶಿವಕುಮಾರ ದಾವಣಗೆರೆ 105ನೇ ಬಾರಿ ರಕ್ತದಾನ ಮಾಡಿ ಗಮನ ಸೆಳೆದರು. ಸಾಹಿತಿ ಯಶವಂತ ಕೊಕ್ಕನವರ ಮಾತನಾಡಿದರು, ಗಾಯಕ ಎಂ.ಡಿ.ಆನಂದ ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಚನ್ನಬಸು ಹುರಕಡ್ಲಿ,ಯೋಗ ಗುರು ಚನ್ನಬಸವ ಗುರೂಜಿ, ಪುರಸಭಾ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಡಾ.ಎಂ.ಎಚ್‌.ನಾಯಕ, ಡಾ.ಮಹೇಶ್ ಕಲ್ಲೇದ, ರಾಘವೇಂದ್ರ ನರಗುಂದ, ಮಲ್ಲೇಶಪ್ಪ ಕಟಗಿ, ಸವಿತಾ ಹುರಕಡ್ಲಿ ಇತರರಿದ್ದರು.ಪತ್ರಕರ್ತ ಜಯರಾಮ ಶೆಟ್ಟಿ ಸ್ವಾಗತಿಸಿ, ಶಿವಾನಂದ ನೇಗಿನಾಳ ನಿರೂಪಿಸಿದರು.