ಇಸ್ಲಮಾಬಾದ್ 25: ಕಳೆದ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಕುರಿತು ಪಾಕಿಸ್ತಾನವು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಉಗ್ರ ಕೃತ್ಯವನ್ನು ಖಂಡಿಸಿತ್ತು. ಆದರೆ ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಖ್ ದರ್ ಮಾತ್ರ ಪಹಲ್ಗಾಮ್ ದಾಳಿಕೋರರನ್ನು ಸ್ವಾತಂತ್ರ್ಯ ಸೇನಾನಿಗಳುʼ ಎಂದು ಕರೆದು ಉದ್ಧಟತನ ಮೆರೆದಿದ್ದಾರೆ.
ಇಸ್ಲಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್, “ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ದಾಳಿ ನಡೆಸಿದವರು ಸ್ವಾತಂತ್ರ್ಯ ಹೋರಾಟಗಾರರಾಗಿರಬಹುದು” ಎಂದರು.
ಪಹಲ್ಗಾಮ್ ದಾಳಿಯ ಬಳಿಕ ಭಾರತವು ಪಾಕಿಸ್ಥಾನದ ವಿರುದ್ದ ಹಲವು ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಂಡಿದೆ. ವಾಘಾ ಗಡಿ ಮುಚ್ಚುವುದು, ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಉತ್ತರವಾಗಿ ಗುರುವಾರ ಪಾಕಿಸ್ತಾನವೂ ಕೆಲವು ಪ್ರತೀಕಾರ ಕ್ರಮಗಳನ್ನು ಘೋಷಿಸಿದೆ.
ಭಾರತ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದರೆ ಅಥವಾ ದಾಳಿ ಮಾಡಿದರೆ, ದೇಶವೂ ಇದೇ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂದು ದರ್ ಎಚ್ಚರಿಸಿದ್ದಾರೆ. “ಪಾಕಿಸ್ತಾನದ ಮೇಲೆ ನೇರವಾಗಿ ದಾಳಿ ಮಾಡಿದರೆ, ತಕ್ಕ ಉತ್ತರ ನೀಡಲಾಗುವುದು” ಎಂದು ಅವರು ಹೇಳಿದರು.