ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳವು

ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳವು  Theft at Ramalingeshwara Temple


ಸವದತ್ತಿ 19 : ನಗರದ ಗಿರಿಜಣ್ಣವರ ಓಣಿಯಲ್ಲಿರುವ ಪುರಾತನ   ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಸುಮಾರು 80 ಸಾವಿರಕ್ಕೂ ಅಧಿಕ ಮೌಲ್ಯದ ಬೆಳ್ಳಿ ಹಾಗೂ ತಾಮ್ರದ ವಸ್ತುಗಳು ಕಳವಾಗಿವೆ. ಶುಕ್ರವಾರ ಬೆಳಗಿನ ಜಾವ 3ರಿಂದ 4.30ರ ನಡುವೆ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಮೂರು ಬಾಗಿಲುಗಳ ಬೀಗ ಮುರಿದು ಒಳನುಗ್ಗಿದ ಕಳ್ಳ, ಕೆಲವು ಸಿಸಿಟಿವಿ ಕ್ಯಾಮೆರಾಗಳಿಗೆ ಬಟ್ಟೆ ಕಟ್ಟಿದ್ದಾನೆ. ದೇವರ ಬೆಳ್ಳಿಯ ಕಣ್ಣಬಟ್ಟುಗಳು, ಸಣ್ಣ ಬೆಳ್ಳಿ ಮೂರ್ತಿಗಳು, ಉತ್ಸವ ಮೂರ್ತಿಯ ಅಭಿಷೇಕದ ತಾಮ್ರದ ತಟ್ಟೆ, ಎರಡು ದೊಡ್ಡ ತಾಮ್ರದ ತಪೇಲಿಗಳು ಹಾಗೂ ಎರಡು ತಾಮ್ರದ ಪರಾತಗಳು ಕಳವಾಗಿವೆ. ಕೃತ್ಯವನ್ನು ಓರ್ವ ವ್ಯಕ್ತಿಯೇ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಕಳ್ಳನು ಕೃತ್ಯಕ್ಕೂ ಒಂದು ದಿನ ಮುನ್ನ ದೇವಸ್ಥಾನಕ್ಕೆ ಭಕ್ತನಂತೆ ಬಂದು, ದೇವಸ್ಥಾನದಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಸ್ಥಳವನ್ನು ಗಮನಿಸಿರುವ ದೃಶ್ಯಾವಳಿಗಳೂ ಪೊಲೀಸರಿಗೆ ಲಭ್ಯವಾಗಿವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.