ಮಹಾತ್ಮರ ಚಿಂತನೆಗಳು ಇಂದಿಗೂ ಪ್ರಸ್ತುತ: ನಿರ್ವಾಣ ಮಹಾಸ್ವಾಮಿಗಳು

ಮಹಾತ್ಮರ ಚಿಂತನೆಗಳು ಇಂದಿಗೂ ಪ್ರಸ್ತುತ: ನಿರ್ವಾಣ ಮಹಾಸ್ವಾಮಿಗಳು  The thoughts of great souls remain relevant even today: Nirvana Mahaswamiji


ಬೀಳಗಿ 17 : ಟಿವಿ ಧಾರಾವಾಹಿಗಳನ್ನು ನೋಡುವುದನ್ನು ಬಿಟ್ಟು ಪುರಾಣ, ಪ್ರವಚನಗಳನ್ನು ಆಲಿಸುವುದರಿಂದ ಧಾರ್ಮಿಕ ಚಿಂತನೆಗಳು ಹೆಚ್ಚುತ್ತವೆ. ಮಹಾತ್ಮರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ ಎಂದು ಮನ್ನಿಕೇರಿ ದಿಗಂಬರೇಶ್ವರ ಮಠದ ಪೀಠಾಧಿಕಾರಿ ನಿರ್ವಾಣ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಮನ್ನಿಕೇರಿ ಗ್ರಾಮದ ದಿಗಂಬರೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ 23ನೇ ವರ್ಷದ ಪುರಾಣ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪುರಾಣ ಕೇಳುವುದರಿಂದ ಮನುಷ್ಯನಲ್ಲಿ ಭಕ್ತಿ ಭಾವನೆ ಮೂಡುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆಯುವ ಪ್ರೇರಣೆ ದೊರೆಯುತ್ತದೆ. ಪುರಾಣ ಮತ್ತು ಪ್ರವಚನಗಳು ಗ್ರಂಥಾಲಯಗಳಿದ್ದಂತೆ. ಅವುಗಳ ಮೂಲಕ ಮಹಾತ್ಮರ ತ್ಯಾಗಮಯ ಜೀವನ ಹಾಗೂ ಆದರ್ಶಗಳನ್ನು ತಿಳಿದುಕೊಳ್ಳಬಹುದು. ಇಂತಹ ಪುರಾಣ ಪ್ರವಚನಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು.  

ಶ್ರೀಮಠದಲ್ಲಿ ನಡೆಯುವ ಬಸವ ಪುರಾಣವನ್ನು ಸದ್ಭಕ್ತರು ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಆಲಿಸಿ ಧನ್ಯರಾಗಬೇಕು ಎಂದು ಕರೆ ನೀಡಿದರು. ಶಿವಪುರ ಕೆ.ಎಚ್‌. ಗ್ರಾಮದ ಶಿವಲಿಂಗೇಶ್ವರ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು ಬಸವ ಪುರಾಣಕ್ಕೆ ಚಾಲನೆ ನೀಡಿ ಮಾತನಾಡಿ, ಪುರಾಣ-ಪ್ರವಚನಗಳು ಪ್ರಾಚೀನ ಕಾಲದ ಧರ್ಮ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುತ್ತವೆ. ಭಕ್ತಿ ಮಾರ್ಗ,  ದೇವರ ಲೀಲೆಗಳನ್ನು ವಿವರಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿಸುತ್ತವೆ ಎಂದು ಹೇಳಿದರು.  ಕಾತರಕಿಯ ಮುತ್ತು ಗವಾಯಿಗಳು ಸಂಗೀತ ಸೇವೆ ಸಲ್ಲಿಸಿದರು. ವೀರಭದ್ರ ಬಡಿಗೇರ ತಬಲಾ ಸಾಥ್ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಹಳ್ಳೂರ, ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್ಡಿಎಂಸಿ ಅಧ್ಯಕ್ಷ ಬಿ.ಆರ್‌. ಸೊನ್ನದ, ಪಿಕೆಪಿಎಸ್ ಅಧ್ಯಕ್ಷ ಪರುತಪ್ಪ ಸಿಕ್ಕೇರಿ, ಪಿಕೆಪಿಎಸ್ ನಿರ್ದೇಶಕ ಶಿವಾನಂದ ಮಂಕಣಿ, ಶಂಕ್ರ​‍್ಪ ಬನಪ್ಪನವರ ಹಾಗೂ ಶಂಕರ ಕರಡಿ ಉಪಸ್ಥಿತರಿದ್ದರು.