ಕಾರ್ಯಕ್ರಮಗಳ ಯಶಸ್ಸಿನಲ್ಲಿ ನಿರೂಪಣೆಯ ಪಾತ್ರ ಪ್ರಮುಖ

ಕಾರ್ಯಕ್ರಮಗಳ ಯಶಸ್ಸಿನಲ್ಲಿ ನಿರೂಪಣೆಯ ಪಾತ್ರ ಪ್ರಮುಖ  The role of anchoring is crucial to the success of programs


ಬಳ್ಳಾರಿ, ಆ. 22: ಯಾವುದೇ ಕಾರ್ಯಕ್ರಮದ ಯಶಸ್ಸಿನಲ್ಲಿ ನಿರೂಪಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾರ್ಯಕ್ರಮದ ವೈಶಿಷ್ಟ್ಯವನ್ನು ಅರಿತು, ಸಭಿಕರಿಗೆ ಧ್ವನಿಪೂರ್ಣವಾಗಿ ತಲುಪಿಸುವ ಜವಾಬ್ದಾರಿ ನಿರೂಪಕರ ಮೇಲಿದೆ. ಆದ್ದರಿಂದ ಸಭಾ ನಿರ್ವಹಣಾ ಕೌಶಲ್ಯವು ಇಂದಿನ ನಿರೂಪಕರಿಗೆ ಅಗತ್ಯವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಎ.ಕೆ. ಜಲಾಲಪ್ಪ ಅಭಿಪ್ರಾಯಪಟ್ಟರು.  

ನಗರದ ಶ್ರೀ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ದಿ. ಕೋಳೂರು ಪುಟ್ಟನಗೌಡ ಹಾಗೂ ಕೋಳೂರು ನೀಲಮ್ಮ ಸ್ಮಾರಕ ದತ್ತಿ ಮತ್ತು ದಿ. ಚಿಲಕರಾಯ ಬಸವನಗೌಡ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳ ಜೀವನಕ್ಕೆ ಅಗತ್ಯವಾದ ಹಲವು ಉಪನ್ಯಾಸ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಎ. ಹಿರೇಮಠ ಮಾತನಾಡಿ, ಶಿಕ್ಷಕರಿಗೆ ಸಭಾ ನಿರ್ವಹಣಾ ಕೌಶಲ್ಯ ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.  

ಕಸಾಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರ​‍್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಕೆಣಿ ಬಸವರಾಜ, ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಮಠಂ ಗುರುಪ್ರಸಾದ್, ಸಿಂದಗಿ ಗವಿಸಿದ್ದಪ್ಪ, ಡಾ. ಬಿ. ದಾನಪ್ಪ, ಕಸಾಪ ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ. ಚಂದ್ರಶೇಖರಾಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಕು. ಪೂರ್ಣಿಮಾ ಎಂ. ನಿರೂಪಿಸಿದರು. ಯುವರಾಜ್ ಸ್ವಾಗತಿಸಿದರು.