ತಿರಂಗಾ ನಮ್ಮ ಹೆಮ್ಮೆ, ದೇಶದ ಏಕತೆ ನಮ್ಮ ಶಕ್ತಿ: ವಿರೂಪಾಕ್ಷಪ್ಪ ಬಳ್ಳಾರಿ

ತಿರಂಗಾ ನಮ್ಮ ಹೆಮ್ಮೆ, ದೇಶದ ಏಕತೆ ನಮ್ಮ ಶಕ್ತಿ: ವಿರೂಪಾಕ್ಷಪ್ಪ ಬಳ್ಳಾರಿ  The Tiranga is our pride; the country's unity is our strength: Virupakshappa Ballari

ಬ್ಯಾಡಗಿ, ಆ.13: ರಾಷ್ಟ್ರಧ್ವಜ ತಿರಂಗಾ ಕೇವಲ ಮೂರು ಬಣ್ಣಗಳ ಸಂಕೇತವಲ್ಲ. ಅದು ದೇಶದ ಸ್ವಾತಂತ್ರ್ಯ, ತ್ಯಾಗ, ಶೌರ್ಯ ಹಾಗೂ ಏಕತೆಯ ಪ್ರತೀಕವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.  ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನ ಸಾರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.  

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನಡೆಯುತ್ತಿರುವ ‘ಹರ್ ಘರ್ ತಿರಂಗಾ’ ಅಭಿಯಾನವು ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜಾಗೃತಿ ಮೂಡಿಸುತ್ತಿದೆ. ಯುವಕರು ದೇಶದ ಭವಿಷ್ಯದ ಶಕ್ತಿಯಾಗಿದ್ದು, ಶಿಕ್ಷಣದ ಜೊತೆಗೆ ದೇಶಪ್ರೇಮ, ಶಿಸ್ತು, ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.  ಆ.15ರಂದು ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಏಕತೆ ಮತ್ತು ಅಖಂಡತೆಗೆ ಕೈಜೋಡಿಸಬೇಕು. ದೇಶದ ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾರ್ವಭೌಮತ್ವಕ್ಕೆ ಗೌರವ ಸಲ್ಲಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.  

ಬಸಣ್ಣ ಛತ್ರದವರು ಮಾತನಾಡಿ, ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಿದೆ. ವಿದೇಶಿ ಆಳ್ವಿಕೆಯಿಂದ ಮುಕ್ತವಾಗಿ ಸ್ವತಂತ್ರ ಭಾರತ 80ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಬೆಳೆಸುವ ಅಗತ್ಯವಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಪ್ರತಿಯೊಂದು ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಕರೆ ನೀಡಿರುವುದು ಶ್ಲಾಘನೀಯ ಎಂದರು.  ಮುಖಂಡ ಎಂ.ಎಸ್‌. ಪಾಟೀಲ ಮಾತನಾಡಿ, ದೇಶ ಮತ್ತು ದೇಶಾಭಿಮಾನ ಹೃದಯದಲ್ಲಿದ್ದಾಗ ಮಾತ್ರ ಸ್ವಾತಂತ್ರ್ಯದ ಪರಿಕಲ್ಪನೆಗೆ ಪೂರ್ಣ ಅರ್ಥ ಬರುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾಲ್ಗೊಳ್ಳುವಿಕೆ ಪ್ರಮುಖವಾಗಿದೆ ಎಂದರು.  

ತಾಲೂಕು ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ ಮಾತನಾಡಿ, ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ದೇಶಭಕ್ತರ ತ್ಯಾಗ ಮತ್ತು ಬಲಿದಾನವಿದೆ. ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶದ ಭವ್ಯ ಇತಿಹಾಸವನ್ನು ಸ್ಮರಿಸಬೇಕು. ಇಂತಹ ತಿರಂಗಾ ಯಾತ್ರೆಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಏಕತೆಯನ್ನು ಮೂಡಿಸುತ್ತವೆ ಎಂದರು.  ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಆರಂಭವಾದ ತಿರಂಗಾ ಯಾತ್ರೆಯು ಹಳೆ ಪುರಸಭೆ ಹಾಗೂ ಮುಖ್ಯರಸ್ತೆಯ ಮೂಲಕ ಸಾಗಿ ತಹಶೀಲ್ದಾರ್ ಕಚೇರಿ ತಲುಪಿತು.  

ಯಾತ್ರೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್, ಎಚ್‌. ಮುರುಗೇಶ ಶೆಟ್ಟರ್, ಹಾಲೇಶ್ ಜಾದವ್, ಶಿವಾನಂದ ಕಡಗಿ, ಈರ​‍್ಪ ಚೌಟಿ, ಸುರೇಶ್ ಉದ್ಯೋಗಣ್ಣ, ಜಿತೇಂದ್ರ ಸುಣಗಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರು, ಯುವಕರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಭಾರತೀಯ ಸೇನೆಯ ಸೈನಿಕರು ಹಾಗೂ ದೇಶಪ್ರೇಮಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.