ಕಾಯಕಕ್ಕೆ ಶರಣರು ಆಧ್ಯಾತ್ಮಿಕ ಸ್ವರೂಪ ನೀಡಿದ್ದಾರೆ : ಶಿಕ್ಷಕ ಕೊಟ್ರೇಶ್

ಕಾಯಕಕ್ಕೆ ಶರಣರು ಆಧ್ಯಾತ್ಮಿಕ ಸ್ವರೂಪ ನೀಡಿದ್ದಾರೆ : ಶಿಕ್ಷಕ ಕೊಟ್ರೇಶ್  The Sharanas have given a spiritual dimension to work: Teacher Kotresh


ಹೂವಿನಹಡಗಲಿ 12: 12ನೇ ಶತಮಾನದಲ್ಲಿ ಶರಣರು ಕಾಯಕಕ್ಕೆ ಆಧ್ಯಾತ್ಮಿಕ ಸ್ವರೂಪ ನೀಡುವುದರ ಜೊತೆಗೆ, ಕಾಯಕವನ್ನು ಶ್ರಮ ಸಂಸ್ಕೃತಿಯ ಪ್ರತೀಕವನ್ನಾಗಿ ರೂಪಿಸಿದ್ದಾರೆ ಎಂದು ಶಿಕ್ಷಕ, ಬರಹಗಾರ ಎಚ್‌.ಕೆ. ಕೊಟ್ರೇಶ್ ಅಭಿಪ್ರಾಯಪಟ್ಟರು.  

ಕನ್ನಡ ಸಾಹಿತ್ಯ ಪರಿಷತ್ತಿನ ಇಟ್ಟಿಗಿ ಹೋಬಳಿ ಘಟಕ ಹಾಗೂ ತಾಲೂಕು ಘಟಕದ ವತಿಯಿಂದ ತಾಲೂಕಿನ ಉತ್ತಂಗಿ ಗ್ರಾಮದ ಶ್ರೀ ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಡೆಕೋಟೆ ಕರಿಬಸಪ್ಪ, ಶ್ರೀಮತಿ ಚಂದ್ರಮ್ಮ ಸ್ಮರಣಾರ್ಥ ದತ್ತಿ, ಅಗೋಳ ಬಸವರಾಜಪ್ಪ ಸ್ಮರಣಾರ್ಥ ದತ್ತಿ ಹಾಗೂ ತುರಕಾಣಿ ಶಿವಪುತ್ರ​‍್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ‘ಕಾಯಕ ಮತ್ತು ದಾಸೋಹ’ ಹಾಗೂ ‘ಅವಿಭಕ್ತ ಕುಟುಂಬ’ ವಿಷಯಗಳ ಕುರಿತು ಮಾತನಾಡಿದ ಎಚ್‌.ಕೆ. ಕೊಟ್ರೇಶ್, ಕಾಯಕವೆಂದರೆ ಕೇವಲ ಉದ್ಯೋಗವಲ್ಲ. ವೃತ್ತಿಯಲ್ಲಿ ತನ್ಮಯತೆ, ಶ್ರದ್ಧೆ, ಭಕ್ತಿ ಹಾಗೂ ಗೌರವ ಬೆರೆತಾಗ ಮಾತ್ರ ಅದು ನಿಜವಾದ ಕಾಯಕವಾಗುತ್ತದೆ ಎಂದು ಹೇಳಿದರು.  

ದತ್ತಿ ದಾನಿ ಗುಡೆಕೋಟೆ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಎಸ್‌. ಪ್ರಿಯಾಂಕ, ಸಿ. ಕೊಟ್ರಮ್ಮ ಹಾಗೂ ಎಸ್‌.ಕೆ. ಧನುಷ್ ಉಪಸ್ಥಿತರಿದ್ದರು. ಶಿಕ್ಷಕ ಸಿ. ಮಲ್ಲನಗೌಡ ಸ್ವಾಗತಿಸಿದರು.  

ಕಸಾಪ ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ. ವಿನಯರಾಜ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಅಗೋಳ ಸುಭಾಷ್ ಹಾಗೂ ಕಲಾವಿದ ಬೆಟ್ಟಪ್ಪ ಉಪಸ್ಥಿತರಿದ್ದರು.  ಕಲಾವಿದರಾದ ಮಲ್ಲಪ್ಪ ಕುಂಬಾರ ಹಾಗೂ ಜ್ಯೋತಿ ಬಸವರಾಜಪ್ಪ ಜನಪದ ಗೀತೆ, ವಚನ ಹಾಗೂ ಭಜನಾ ಪದಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಸಿ. ಚೇತನ್ ಕುಮಾರ್ ವಂದಿಸಿದರು. ಕನ್ನಡ ಶಿಕ್ಷಕ ಕೆ. ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.