ದಿ. ಎಂ. ಎಫ್‌. ಪಾಟೀಲರದು ಸಾರ್ಥಕ ಬದುಕು: ಶಾಸಕ ಸಿ.ಸಿ. ಪಾಟೀಲ

The. M. F. Patil's life is meaningful: MLA C.C. Patil

ದಿ. ಎಂ. ಎಫ್‌. ಪಾಟೀಲರದು ಸಾರ್ಥಕ ಬದುಕು: ಶಾಸಕ ಸಿ.ಸಿ. ಪಾಟೀಲ 

ಧಾರವಾಡ 19: ದಿ. ಎಂ. ಎಫ್‌. ಪಾಟೀಲರದು ಸಾರ್ಥಕ ಬದುಕು. ಹುಟ್ಟು-ಸಾವಿನ ನಡುವಿನ ಅವರ ಬದುಕು ಸಮಾಜಕ್ಕೊಂದು ಅನುಕರಣೀಯ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.  

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಮರಿಗೌಡ ಫಕ್ಕೀರಗೌಢ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಸಹಕಾರ ಆಂದೋಲನ’ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  

ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದ ಅವರು ಅಪಾರವಾದ ಲೋಕಾನುಭವ ಹೊಂದಿದ್ದರು. ಅಂತಹ ಬದ್ಧತೆ, ಪ್ರಾಮಾಣಿಕ ವ್ಯಕ್ತಿಗಳು ಸಿಗುವುದು ಇಂದು ಅಪರೂಪ. ರಾಜಕಾರಣಕ್ಕಿಂತ ಸಮಾಜ ಸೇವೆ ಹಾಗೂ ಸಂಘಟನೆಯಲ್ಲಿ ಅವರಿಗೆ ಆಸಕ್ತಿ ಹೆಚ್ಚು. ಅಂತಹ ಪುಣ್ಯಪುರುಷರನ್ನು ದತ್ತಿ ಮೂಲಕ ಕುಟುಂಬದವರು ಸ್ಮರಿಸುವುದು ಅನನ್ಯವಾದುದು. ಸರ್‌. ಸಿದ್ಧಪ್ಪ ಕಂಬಳಿಯವರು ಆಗಿನ ಮುಂಬೈ ಸರಕಾರದಲ್ಲಿ 8 ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನೀಗಿಸಿದವರು. ಅವರ ಒಂದು ಮೂರ್ತಿ ಲಕ್ಕುಂಡಿಯಲ್ಲಿ ಸ್ಥಾಪಿಸುವ ಬೇಡಿಕೆ ಇದ್ದು ನಾನೇ ಸ್ವಂತ ಖರ್ಚಿನಿಂದ ಮಾಡಿಸುವುದಾಗಿ ಭರವಸೆ ನೀಡಿದರು.  

ಕುಂದಗೋಳ ಶಾಸಕ ಎಂ. ಆರ್‌. ಪಾಟೀಲ ಮಾತನಾಡಿ, ದಿ. ಎಂ. ಎಫ್‌.  ಪಾಟೀಲರು ಸನ್ಮಾರ್ಗದಲ್ಲಿ ನಡೆದು ಬಂದ ಮಹಾನುಭಾವಿಗಳು. ನಾನಿಂದು ಶಾಸಕನಾಗಲು ನಮ್ಮ ದೊಡ್ಡಪ್ಪ ದಿ. ಎಂ. ಎಫ್‌. ಪಾಟೀಲರು ನೀಡಿದ ಸಂಸ್ಕಾರವೇ ಕಾರಣ. ಆಗಿನ ಕಾಲದ ಎಲ್ಲಾ ರಾಜಕೀಯ ಮುತ್ಸದ್ಧಿಗಳು ಸಹಕಾರಿ ಧುರೀಣರು ಎಂ.ಎಫ್‌. ಪಾಟೀಲರ ಒಡನಾಡಿಗಳೇ ಆಗಿದ್ದರು. ಬಾಲ್ಯದಿಂದಲೇ ನನಗೂ ನಮ್ಮ ಕುಟುಂಬದವರಿಗೂ ಅವರು ಸಾಥಕ ಬದುಕಿನ ಜೀವನ ಪಾಠ ಹೇಳಿದವರು. ಶಿಸ್ತಿಗೆ ಹೆಸರಾದವರಾಗಿದ್ದರು ಎಂದರು.  

ಜಿ.ಪಿ. ಪಾಟೀಲ ಮಾತನಾಡಿ, ಎಂ. ಎಫ್‌. ಪಾಟೀಲರು ಸಹಕಾರಿ ಕ್ಷೇತ್ರದ ಸಾಧನೆಯ ದಿಗ್ಗಜರು. ಕುಂದಗೋಳ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರದೇ ಶ್ರಮ ಹೆಚ್ಚು . ಅವರೊಬ್ಬ ಜನಮಾನಸದ ವ್ಯಕ್ತಿಗಳು. ಎಸ್‌.ಆರ್‌. ಬೊಮ್ಮಾಯಿ ಹಾಗೂ ಎಂ. ಎಫ್‌. ಪಾಟೀಲರ ನಡುವೆ  ಅವಿನಾಭಾವ ಸಂಬಂಧವಿತ್ತು ಎಂದು ಹೇಳಿದರು.  

‘ಸಹಕಾರಿ ಆಂದೋಲನ’ ಕುರಿತು ಧಾರವಾಡ ಸಿ.ಟಿ.ಸಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಎಲ್‌. ಶಿವಳ್ಳಿ ಮಾತನಾಡಿ, ಸಮಾನತೆಯ ನೆಲೆಯಲ್ಲಿ ಪರಸ್ಪರರೂ ಒಂದುಗೂಡಿ ಬಾಳುವುದೇ ಸಹಕಾರ. ಇದೊಂದು ಸ್ವಯಂಪ್ರೇರಿತ ವಿಧಾನ. ರಾಬರ್ಟ್‌ ಓವೆನ್ ವಿಶ್ವದ ಮೊದಲ ಸಹಕಾರಿ ಪ್ರವರ್ತಕರಾದರೆ, ಭಾರತದಲ್ಲಿ ಮೊದಲು ಸಹಕಾರಿ ಸಂಘವನ್ನು 1905 ರಲ್ಲಿ ಕಣಗಿನಹಾಳದಲ್ಲಿ ಸಿದ್ಧನಗೌಡ ಪಾಟೀಲ ಸ್ಥಾಪಿಸಿ ಕರ್ನಾಟಕಕ್ಕೆ ಹೆಮ್ಮೆ ತಂದರು. ದೇಶದ ಅರ್ಥವ್ಯವಸ್ಥೆ ಸದೃಢವಾಗಬೇಕಾದರೆ ಸಹಕಾರ ಸಂಘದಿಂದ ಮಾತ್ರ ಸಾಧ್ಯ. ಡಾ. ಕುರಿಯನ್, ಡಾ. ಸ್ವಾಮಿನಾಥನ್ ಸಹಕಾರಿ ಕ್ಷೀರಕ್ರಾಂತಿ ಹಾಗೂ ಹಸಿರು ಕ್ರಾಂತಿಗೆ ಕಾರಣರಾದರು. ಎಂ.ಎಫ್‌. ಪಾಟೀಲ, ಎಸ್‌.ಎಫ್‌. ಪಾಟೀಲ, ಎ.ಎಸ್‌. ಪಾಟೀಲ ಹಾಗೂ ಎಸ್‌.ವಿ. ಪಾಟೀಲರಂತಹ ಮುತ್ಸಧಿಗಳು ಸಹಕಾರಿ ಕ್ಷೇತ್ರವನ್ನು ಸಬಲಗೊಳಿಸಿದ್ದಾರೆ ಎಂದರು.   

ಖ್ಯಾತ ಉದ್ಯಮಿ ಭರತ ಬೊಮ್ಮಾಯಿ ದತ್ತಿ ಕುರಿತು ಮತ್ತು ದತ್ತಿದಾನಿ ಬೊಮ್ಮನಾಯಕ ಪಾಟೀಲ ದತ್ತಿ ಆಶಯ ಕುರಿತು ಮಾತನಾಡಿದರು. ವೇದಿಕೆ ಮೇಲೆ ಸುರೇಖಾ ಬೊಮ್ಮನಾಯಕ ಪಾಟೀಲ ಇದ್ದರು.  

ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.  

ಕುಂದಗೋಳ ಶಾಸಕ ಎಂ. ಆರ್‌. ಪಾಟೀಲ, ಕರ್ನಾಟಕ ಸಹಕಾರ ಗ್ರಾಹಕರ ಮಹಾಮಂಡಳ ಅಧ್ಯಕ್ಷ ಜಿ. ಪಿ. ಪಾಟೀಲ ಮತ್ತು ದತ್ತಿ ದಾನಿ ಸುರೇಖಾ ಮತ್ತು ಬೊಮ್ಮನಾಯ್ಕ ಪಾಟೀಲರು ವೇದಿಕೆ ಮೇಲೆ ಉಪಸ್ಥಿತರಿದ್ದರು.  

ಡಾ. ಮಲ್ಲಿಕಾರ್ಜುನ ಪಾಟೀಲ, ಬಸಯ್ಯ ಕಾಡಯ್ಯ ಹಿರೇಮಠ, ಸಿ.ಎಸ್‌. ಪಾಟೀಲ, ಮಂಜುನಾಥ ಉಡುಪಿ, ಮೋಹನ ಸಿದ್ಧಾಂತಿ, ಎಸ್‌.ಎಂ. ಪಾಟೀಲ, ಎಸ್‌.ಜಿ. ಪಾಟೀಲ, ಕಿರಣ ಶಿಂಧೆ, ಎಸ್‌.ಎಸ್‌. ಲಕ್ಷ್ಮೇಶ್ವರ, ಮರಿಗೌಡ ಪಾಟೀಲ, ಎಸ್‌.ಬಿ. ಪಾಟೀಲ, ಕಾಶಿನಾಥ ಹಾದಿಮನಿ, ಎಂ.ಎಫ್‌. ಪಾಟೀಲ ಪರಿವಾರದವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.