ರಸ್ತೆ ಅಗಲೀಕರಣಕ್ಕೆ ಬಡ ಕುಟುಂಬಗಳ ಕಣ್ಣೀರಿನ ಮನವಿ; 96 ವರ್ಷದ ವೃದ್ಧೆಯ ಆಕ್ರಂದನ

ರಸ್ತೆ ಅಗಲೀಕರಣಕ್ಕೆ ಬಡ ಕುಟುಂಬಗಳ ಕಣ್ಣೀರಿನ ಮನವಿ; 96 ವರ್ಷದ ವೃದ್ಧೆಯ ಆಕ್ರಂದನ Tearful plea from poor families regarding road widening; the anguished cry of a 96-year-old woman

ಲೋಕದರ್ಶನ ವರದಿ

 ಜಮಖಂಡಿ 20: ನಗರದ ಎ.ಜಿ. ದೇಸಾಯಿ ಸರ್ಕಲ್ ಸಮೀಪ ವಿಜಯಪುರ ರಸ್ತೆಯ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಬಡ ಕುಟುಂಬಗಳು ಮನೆ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಕಣ್ಣೀರಿನ ಮನವಿ ಸಲ್ಲಿಸಿವೆ. ವಿಶೇಷವಾಗಿ 96 ವರ್ಷದ ವೃದ್ಧೆಯ ಆಕ್ರಂದನ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.  

ಸುಮಾರು ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬಗಳು ರಸ್ತೆ ಅಗಲೀಕರಣದ ಕಾರಣ ತಮ್ಮ ಮನೆಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿವೆ. ಈ ಪ್ರದೇಶದಲ್ಲಿ ಅಂಗವೈಕಲ್ಯ ಹೊಂದಿರುವ ಕುಟುಂಬ, ಪತಿಯಿಲ್ಲದ ಮಹಿಳೆ ಹಾಗೂ ಒಂಟಿಯಾಗಿ ಜೀವನ ಸಾಗಿಸುತ್ತಿರುವ 96 ವರ್ಷದ ವೃದ್ಧೆ ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಪತಿಯಿಲ್ಲದ ಮಹಿಳೆಯ ಅಳಲು  

"ನನಗೆ ಯಾರೂ ಆಸರೆಯಿಲ್ಲ. ಪತಿ ನಿಧನರಾದ ಬಳಿಕ ಜೀವನ ಸಾಗಿಸುವುದೇ ಕಷ್ಟವಾಗಿದೆ. ಕಣ್ಣಿನ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದೇನೆ. ಬಾಡಿಗೆ ಮನೆ ಪಡೆಯಲು ಆರ್ಥಿಕ ಸಾಮರ್ಥ್ಯ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆ ತೆರವುಗೊಳಿಸುವಂತೆ ಹೇಳುತ್ತಿರುವುದು ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. 50ಹಿ60 ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸಿಸುತ್ತಿದ್ದೇವೆ," ಎಂದು ಮಹಿಳೆ ಕಣ್ಣೀರಿಟ್ಟರು.  

96 ವರ್ಷದ ವೃದ್ಧೆಯ ನೋವು  

"ನನಗೆ ಈಗ 96 ವರ್ಷ. ಸುಮಾರು 70 ವರ್ಷಗಳಿಂದ ಇದೇ ಸ್ಥಳದಲ್ಲಿ ಬದುಕುತ್ತಿದ್ದೇನೆ. ನನಗೆ ಯಾರೂ ಇಲ್ಲ. ಜೀವನದ ಸಂಧ್ಯಾಕಾಲದಲ್ಲಿ ಮನೆ ಬಿಟ್ಟು ಎಲ್ಲಿಗೆ ಹೋಗಲಿ? ಬದುಕಿನ ಕೊನೆಯ ದಿನಗಳಲ್ಲಿ ಆಶ್ರಯ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ," ಎಂದು ವೃದ್ಧೆ ಕಣ್ಣೀರಿಡುತ್ತಾ ತಮ್ಮ ನೋವನ್ನು ವ್ಯಕ್ತಪಡಿಸಿದರು.  

ಅಂಗವೈಕಲ್ಯ ಹೊಂದಿರುವ ಕುಟುಂಬದ ಸಂಕಷ್ಟ  

ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಕುಟುಂಬವೂ ಮನೆ ಕಳೆದುಕೊಳ್ಳುವ ಭೀತಿಯಲ್ಲಿದೆ. "ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಮಗ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಬಾಡಿಗೆ ಮನೆ ಹುಡುಕಿದರೂ ಯಾರೂ ನೀಡುತ್ತಿಲ್ಲ. ಗಂಡ ಅಂಗವೈಕಲ್ಯ ಹೊಂದಿದ್ದಾರೆ ಎಂಬ ಕಾರಣಕ್ಕೂ ಮನೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಎಲ್ಲಿಗೆ ಹೋಗಬೇಕು?" ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡರು.  

ಸ್ಥಳೀಯ ನಿವಾಸಿಗಳು ಮಾತನಾಡಿ, ರಸ್ತೆ ಅಭಿವೃದ್ಧಿಗೆ ತಮ್ಮ ವಿರೋಧ ಇಲ್ಲ. ಆದರೆ ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಮನೆಗಳನ್ನು ತೆರವುಗೊಳಿಸುವುದು ಮಾನವೀಯವಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.