ಜಾನಪದ ಕಲೆಗಳ ಉಳಿವು ಅಗತ್ಯ: ತಜ್ಞರ ಕರೆ

ಜಾನಪದ ಕಲೆಗಳ ಉಳಿವು ಅಗತ್ಯ: ತಜ್ಞರ ಕರೆ  Survival of folk arts essential: Experts call


ಬಳ್ಳಾರಿ 16 : ಜಾನಪದ ಕಲೆಗಳು ವಿದ್ಯಾರ್ಥಿಗಳಿಗೆ ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳನ್ನು ಪರಿಚಯಿಸುವುದರ ಜೊತೆಗೆ ಭಾಷಾ ಜ್ಞಾನ, ಗ್ರಹಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಈಶಾನ್ಯ ಟೈಮ್ಸ್‌ ಜಿಲ್ಲಾ ವರದಿಗಾರ ಸಿ. ಮಂಜುನಾಥ ಹೇಳಿದರು.  

ತಾಲೂಕಿನ ವಿಠ್ಠಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಗ್ರಾಮೀಣ  ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್‌ ಆಯೋಜಿಸಿದ್ದ ‘ಜಾನಪದ ಚಿತ್ತ ಕಾಲೇಜಿನತ್ತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಹಾಡುಗಳು, ಕಥೆಗಳು ಹಾಗೂ ಗಾದೆಗಳು ಮಕ್ಕಳಲ್ಲಿ ಸೃಜನಶೀಲತೆ ಮತ್ತು ಗ್ರಹಿಕೆ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದರು.  

ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸಾಂಪ್ರದಾಯಿಕ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು. ಕಾಲೇಜುಗಳಲ್ಲಿ ಜಾನಪದ ಸ್ಪರ್ಧೆಗಳು ಮತ್ತು ಯುವಜನೋತ್ಸವಗಳು ಜನಪ್ರಿಯವಾಗುತ್ತಿದ್ದು, ಇವು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.  

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಸಹನಾ ಪಿಂಜಾರ್ ಅವರು ಗ್ರಾಮೀಣ ಜಾನಪದ ಹಾಗೂ ಜಾನಪದ ಕಲೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಬಯಲಾಟದಲ್ಲಿ ಮಹಿಳೆಯರು ಸ್ತ್ರೀ ಪಾತ್ರಗಳ ಜೊತೆಗೆ ಪ್ರಮುಖ ಪಾತ್ರಗಳಲ್ಲೂ ಅಭಿನಯಿಸಲು ಮುಂದೆ ಬರಬೇಕು ಎಂದು ಹೇಳಿದರು.  

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಜಿಪಂ ಸದಸ್ಯ ಎಂ. ತಿರುಮಲ ಅವರು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಜಾನಪದ ಕಲೆಗಳು ಜನರಿಂದ ದೂರವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಜಾನಪದ ಕಲೆಗಳ ಬೆಳವಣಿಗೆ ಮತ್ತು ಕಲಾವಿದರ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.  

ಕಾಲೇಜಿನ ಪ್ರಾಚಾರ್ಯ ಡಿ. ಯರಿಯಪ್ಪ ಅಧ್ಯಕ್ಷತೆ ವಹಿಸಿ, ಜಾನಪದ ಕಲೆಗಳ ಸಂವರ್ಧನೆ ಮತ್ತು ಬೆಳವಣಿಗೆಗೆ ಕಾಲೇಜು ಸದಾ ಬೆಂಬಲ ನೀಡಲಿದೆ ಎಂದರು. ಹಳೆಯ ವಿದ್ಯಾರ್ಥಿಗಳಾದ ಶಿವಗಂಗಮ್ಮ, ಶಾಂತಿ ಮತ್ತಿತರರು ಮಾತನಾಡಿದರು. ವಿದ್ಯಾರ್ಥಿನಿ ಕವನ ಕವನ ವಾಚಿಸಿದರು.  

ರಂಗಕರ್ಮಿ ರಿಯಾಜ್ ಶಿವಮೊಗ್ಗ ರಂಗಗೀತೆಗಳ ಮೂಲಕ ಹಾಗೂ ಮಹಾಜನದಹಳ್ಳಿ ಕೊಟ್ರೇಶ್ ಜಾನಪದ ಗೀತೆ ಹಾಡಿ ರಂಜಿಸಿದರು. ಗ್ರಾಮದ ಮುಖಂಡರಾದ ತಾಯಪ್ಪ ಡಿ. ವಡ್ದು, ಎಂ. ಸಂಜೀವಪ್ಪ, ಹಾವಿನ ಮಡಗು ಜಿ. ರಾಮಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ಟ್ರಸ್ಟ್‌ ವತಿಯಿಂದ ಹಳೆಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ ಅಧ್ಯಕ್ಷ ಜಿ.ಕೆ. ತಿಪ್ಪೇಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಉಮಾಶಂಕರ್ ವಂದಿಸಿದರು.