“ಗಜಲ್ ಗಮಲು”
‘ಶಾಲೆ ಬಿಟ್ಟೊಡನೆ ಹಿಡಿಯಬೇಕು/ಮನೆಯ ದಾರಿ/ಕತ್ತಲಾವರಿಸುವ ಮುನ್ನ ಮನೆ/ಸೇರಬೇಕು/ಜಗಲಿಕಟ್ಟೆ ಅರಳಿಕಟ್ಟೆ ಹಿರಿಯರಿರುವ ಎಡೆ/ಪಾದ ಬೆಳೆಸಬಾರದು ಅವಳು’ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಮೇಲೆ ವಿಧಿಸುವ ಕಟ್ಟುಪಾಡು, ಮಾಡುವ ತಾರತಮ್ಯದ ಕುರಿತು ನೋವು ವ್ಯಕ್ತಪಡಿಸುವ ಕವಿತೆಯ ಈ ಸಾಲುಗಳು ಡಾ. ಸುಜಾತ ಲಕ್ಷ್ಮೀಪುರ ಅವರದ್ದು. ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಅಧ್ಯಯನ ಹಾಗೂ ಬರವಣಿಗೆಯನ್ನು ತಮ್ಮ ನೆಚ್ಚಿನ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕವಿತೆ, ಲೇಖನ, ಗಜಲ್ ಪ್ರಕಟವಾಗಿವೆ. ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ, ನಿರೂಪಣೆ, ಮಾಡಿದ್ದಾರೆ. ನವೋದಯ ವಿಮರ್ಶಾ ಸಾಹಿತ್ಯ, ವಿಚಾರವಾದಿ ಕುವೆಂಪು ಎಂಬ ವಿಮರ್ಶಾ ಸಂಕಲನವನ್ನು ಹೊರ ತಂದಿದ್ದಾರೆ. ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಕವನ ಸಂಕಲನ ಕೂಡ ಪ್ರಕಟವಾಗಿದೆ. ಇವರ ವಿಚಾರವಾದಿ ಕುವೆಂಪು ಪುಸ್ತಕಕ್ಕೆ ರಾಂ. ಕೆ. ಹನುಮಂತಯ್ಯ ಮತ್ತು ಶ್ರೀ ಗೋಪಾಲಯ್ಯ ಹೆಬ್ಬಗೋಡು ದತ್ತಿ ಪ್ರಶಸ್ತಿ ಲಭಿಸಿದೆ. ‘ಶಿವೆ’ ಎಂಬ ಕಾವ್ಯನಾಮದಿಂದ ಗಜಲ್ ಬರೆಯುತ್ತಿರುವ ಇವರ ಗಜಲ್‌ನ ಓದು ಮತ್ತು ಒಳನೋಟ ಓದುಗರಿಗಾಗಿ.
ಗಜಲ್
ಜನ ಬೀದಿ ಬೀದಿಯಲಿ ಹಸಿ"ನಿಂದ ಕೂಗುತ್ತಿದ್ದಾರೆ ಯಾವ ದೈವವೂ ಒಲಿಯುತ್ತಿಲ್ಲ
ಮನೆ ಮನೆಯಲಿ ಅನೇಕ ದೇವರ ಸುಂದರ ಪಟಗಳಿವೆ ಯಾವ ಪೂಜೆಯೂ ಫಲಿಸುತ್ತಿಲ್ಲ
ಬೆಂಕಿಯ ಮೇಲಿನ ನಡಿಗೆಯಾಗಿದೆ ನಮ್ಮೆಲ್ಲರ ಬಾಳು ಯಾವ ಕಸರತ್ತೂ ಉಳಿಸುತ್ತಿಲ್ಲ
ಗಾಳಿ ಕಣಕಣದಲ್ಲೂ ಮೋಸ ವಂಚನೆ ತುಂಬಿದೆ ಯಾವ ನಂಬಿಕೆಯೂ ಹಣ್ಣಾಗುತ್ತಿಲ್ಲ
ಮೋಜು ಮಸ್ತಿಯಲಿ ಸದಾ ಮುಳುಗಿ ಮರುಳಾಗಿದ್ದೇವೆ ಯಾವ ತಿಳಿವೂ ಎಚ್ಚರಿಸುತ್ತಿಲ್ಲ
"ಂಸೆ ಕೊಲೆ ದ್ವೇಷದಲ್ಲೆ ದೊಡ್ಡ ಖು ಕಾಣುತ್ತಿದ್ದೇವೆ ಯಾವ ಪ್ರೇಮವೂ ಬದುಕಿಸುತ್ತಿಲ್ಲ
ಮಳೆ ಬೆಳೆ ಇಲ್ಲದೆ ಬೆಂದು ಬರಡಾಗುತಿದೆ ಈ ಇಳೆ ಯಾವ ಮೋಡವೂ ಕಪ್ಪಾಗುತ್ತಿಲ್ಲ
ಸಾಮಾನ್ಯರ ಹೊಟ್ಟೆ ಬೆನ್ನಿಗಂಟಿ ಕಣ್ಣು ಬಾ"ಯಾಗಿದೆ ಯಾವ ಅದೃಷ್ಟವೂ ಬಲಿಯುತ್ತಿಲ್ಲ
ಶಿವೆ, ಬಾಳಿನ ದಾರಿಗೆ ನೀನೇ ಭರವಸೆಯಾದರೂ ಯಾವ ಬದುಕು ಬದಲಾಗುತ್ತಿಲ್ಲ
ನಂಬಿ ನೆಚ್ಚಿಕೊಂಡ ಕಾಯಕದ ಬದುಕು ನಮ್ಮದು ಯಾವ ಬೆವರ ಹನಿಯೂ ಫಲಗೊಡುತ್ತಿಲ್ಲ
- ಡಾ. ಸುಜಾತಾ ಲಕ್ಷ್ಮೀಪುರ
‘ಎಂಥಾ ಕಾಲ ಬಂತಪ್ಪಾ’ ಎಂಬ ಉದ್ಗಾರ ದಿನಕ್ಕೆ ಒಂದು ಬಾರಿಯಾದರೂ ಪ್ರಜ್ಞಾವಂತರು ಉಚ್ಛರಿಸಿರುತ್ತಾರೆ. ‘ಕಲಿಗಾಲವಯ್ಯ ಇದು ಕಲಿಗಾಲ, ಹೀಗೆ ಮುಂದುವರೆದರೆ ನಮಗಿಲ್ಲವಯ್ಯ ಉಳಿಗಾಲ’ ಎಂಬುದು ಅಷ್ಟೇ ಅಕ್ಷರಶಃ ಸತ್ಯದ ಮಾತು. ಮೋಸ, ವಂಚನೆ, ಕೊಲೆ, ಸುಲಿಗೆ, ಮೋಜು, ಸ್ವೇಚ್ಛಾಚಾರಗಳೇ ತುಂಬಿ ತುಳುಕುತ್ತಿರುವ ಇಂದಿನ ದಿನಮಾನದಲ್ಲಿ ನಾವು ನಂಬಿಕೊಂಡಿರುವ ದೇವರೂ ನಮ್ಮ ರಕ್ಷಣೆಗೆ ಧಾವಿಸಿ ಬರುತ್ತಿಲ್ಲ. ಮತ್ತೆ ಮತ್ತೆ ಅದೇ ಪ್ರಶ್ನೆ ಇದಿರಾಗುತ್ತದೆ, ‘ಇದಕೆ ಕೊನೆ ಎಂಬುದಿಲ್ಲವೆ?’ ಉತ್ತರ ಅಸ್ಪಷ್ಟ. ಈ ಎಲ್ಲ ವಿಷಾದ, ನೋವು ತುಂಬಿಕೊಂಡಿರುವ ಡಾ. ಸುಜಾತಾ ಲಕ್ಷ್ಮೀಪುರ ಅವರ ಗಜಲ್ ವಿಲವಿಲಗೊಳ್ಳುವಂತೆ ಮಾಡುತ್ತದೆ. ಒಳಿತಿನ ನೀರೀಕ್ಷೆಯಲ್ಲಿರುವ ಈ ಗಜಲ್, ಕೆಡುಕಿನ ನಿರ್ನಾಮಕ್ಕೂ ಹಂಬಲಿಸಿ ಬೇಡುತ್ತದೆ.
ಹಸಿವು, ಬಡತನ, ನಿರುದ್ಯೋಗ ಈ ನೆಲಕ್ಕಂಟಿದ ಶಾಪಗಳು. ತುತ್ತಿನ ಚೀಲ ತುಂಬಿಸಲಾಗದ ಜನ ಬೀದಿ ಬೀದಿಯಲ್ಲಿ ಹಸಿವಿನಿಂದ ಮೊರೆ ಇಡುತ್ತಿದ್ದಾರೆ. ತಣಿಸಿ ಪೊರೆಯಬೇಕಾದ ಯಾವ ದೈವವೂ ಕೈ ಹಿಡಿಯುತ್ತಿಲ್ಲ. ಎಲ್ಲರ ಮನೆಯೊಳಗೂ ಕಾಪಿಡುವ ದೇವರ ಅಂದದ ಮೂರ್ತಿಗಳು, ಭಾವಚಿತ್ರಗಳೂ ಇವೆ. ಪೂಜಿಸಿ, ಆರಾಧಿಸಿ ಪರಿಪರಿಯಾಗಿ ಬೇಡಿಕೊಂಡರೂ ಫಲ ದೊರಕುತ್ತಿಲ್ಲ. ಬದುಕುವುದಕ್ಕೆ ಎಷ್ಟೆಲ್ಲಾ ಕಸರತ್ತುಗಳು ನಡೆದಿವೆ, ಆದರೂ ಜೀವಗಳು ಉಳಿಯುತ್ತಿಲ್ಲ. ಸುಳಿದು ಬೀಸುವ ಗಾಳಿಯೂ ವಿಷತುಂಬಿಕೊಂಡಿದೆ. ಉಳಿವಿನ ನಂಬಿಕೆ ದೂರ ದೂರ. ಕ್ಷಣಿಕ ಸುಖದ ಬೆನ್ನುಬಿದ್ದು ಮೋಜು ಮಸ್ತಿಗಾಗಿಯೇ ಜೀವನ ಸವೆಸುತ್ತಿದ್ದೇವೆ. ಯಾವ ತಿಳುವಳಿಕೆಗಳೂ ತಲೆಗೆ ಹೋಗುತ್ತಿಲ್ಲ. ನಿರ್ನಾಮ ಮಾಡುವುದರಲ್ಲಿಯೇ ಖುಷಿ ಅನುಭವಿಸುತ್ತಿದ್ದೇವೆ, ಮನುಷ್ಯಪ್ರೀತಿ ಕೊನೆಗಾಣಿಸುತ್ತಿದ್ದೇವೆ. ಬಿರಿದ ಇಳೆ ಕಪ್ಪು ಮೋಡಗಳ ಕಡೆ ದೃಷ್ಟಿ ಹರಿಸಿದರೂ ಸುರಿಯದ ಮಳೆ ಅಣಕಿಸುತ್ತಿದೆ. ಜನಸಾಮಾನ್ಯನ ರೋದನೆ ಮುಗಿಲು ಮುಟ್ಟಿದರೂ ಯಾವ ಅದೃಷ್ಟದ ಬಾಗಿಲುಗಳೂ ತೆರೆಯುತ್ತಿಲ್ಲ. ಹೌದು, ನಿನ್ನನ್ನೇ ನಂಬಿಕೊಂಡು ಬದುಕು ನಡೆಸುತ್ತಿದ್ದೇವೆ, ನೆಚ್ಚಿಕೊಂಡ ಕಾಯಕದಲ್ಲಿಯೇ ಬೆವರು ಹರಿಸುತ್ತಿದ್ದೇವೆ. ನಮ್ಮ ಬದುಕಿನ್ನೂ ಬದಲಾಗುತ್ತಿಲ್ಲ, ದುಡಿಮೆಗೆ ಫಲ ದೊರೆಯುತ್ತಿಲ್ಲ ಎಂಬ ದೂರಿನ ಜೊತೆಗೆ ಎಲ್ಲ ವಿಷಾದಗಳನ್ನು ಕಾಣಿಸುವ ಗಜಲ್ ಒಳಿತಿಗಾಗಿ ಕಣ್ಣು ಹರವಿ ಕಾಯುತ್ತದೆ.
ಇಲ್ಲಿ ಉತ್ತಿದ್ದನ್ನೇ ಬೆಳೆಯುತ್ತೇವೆ, ಮಾಡಿದ್ದನ್ನೇ ಉಣ್ಣುತ್ತೇವೆ. ನಮ್ಮ ಮಿತಿ ಮೀರಿದ ಮೆರೆಯುವಿಕೆಯೇ ವಿನಾಶಕ್ಕೆ ಮುನ್ನುಡಿ ಬರೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಗಜಲ್ ಮೂಲಕ ಅರ್ಥೈಸಿದ ಕವಯಿತ್ರಿ ಡಾ. ಸುಜಾತಾ ಲಕ್ಷ್ಮೀಪುರ ಅವರಿಗೆ ಧನ್ಯವಾದಗಳು.
- ನಾಗೇಶ್ ಜೆ. ನಾಯಕ
ಶಿಕ್ಷಕರು
ಮೊ. 9900817716
- * * * -