ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಪ್ರತಿಭೆ ವಿಕಸನ: ವಿರೇಶ ಆಂದೋಲಿ

ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಪ್ರತಿಭೆ ವಿಕಸನ: ವಿರೇಶ ಆಂದೋಲಿ  Students' talent blossoms through extracurricular activities: Viresha Andoli

ಲೋಕದರ್ಶನ ವರದಿ 

ಸಿಂದಗಿ 17: ವಿದ್ಯಾರ್ಥಿಗಳು ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ ಕಲೆ, ಸಾಹಿತ್ಯ, ನೃತ್ಯ, ಕ್ರೀಡೆ ಸೇರಿದಂತೆ ವಿವಿಧ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿ ವಿರೇಶ ಆಂದೋಲಿ ಹೇಳಿದರು.  

ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವುದರ ಜೊತೆಗೆ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಧ್ಯಾನ, ಯೋಗ ಹಾಗೂ ಶಿಸ್ತು ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.  

ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಿ. ಮಠ ಹಾಗೂ ನಿವೃತ್ತ ಪ್ರಾಚಾರ್ಯ ಎಂ.ಎಸ್‌. ಹೈಯಾಳಕರ ಮಾತನಾಡಿ, ಪಠ್ಯಪೂರಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿವೆ ಎಂದರು. ಮುಂದಿನ ದಿನಗಳಲ್ಲಿ ಮಹಿಳಾ ಪದವಿ ಕಾಲೇಜಿನಲ್ಲಿ ವಿಜ್ಞಾನ (ಬಿಎಸ್ಸಿ) ಕೋರ್ಸ್‌ ಆರಂಭಿಸುವಂತೆ ಸಲಹೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯ ಎಸ್‌.ಎಂ. ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಭಿಯಂತರ ಸಚಿನ್ ಕೊಪ್ಪ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.