ಉನ್ನತ ಸಾಧನೆಗೆ ಶ್ರಮಿಸಿ; ಹಿರಿಯರಿಗೆ ಪ್ರೀತಿ-ಗೌರವ ತೋರಿಸಿ: ಡಾ. ಅಡಿವೆಪ್ಪ ಇಟಗಿ

ಉನ್ನತ ಸಾಧನೆಗೆ ಶ್ರಮಿಸಿ; ಹಿರಿಯರಿಗೆ ಪ್ರೀತಿ-ಗೌರವ ತೋರಿಸಿ: ಡಾ. ಅಡಿವೆಪ್ಪ ಇಟಗಿ  Strive for high achievements; show love and respect to elders: Dr. Adiveppa Itagi

ಬೆಳಗಾವಿ, ಜು. 10: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ನಿರಂತರ ಶ್ರಮಿಸಬೇಕು. ಜೊತೆಗೆ ಹಿರಿಯರ ಬಗ್ಗೆ ಪ್ರೀತಿ, ಗೌರವ ಮತ್ತು ಆದರವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಅಡಿವೆಪ್ಪ ಇಟಗಿ ಸಲಹೆ ನೀಡಿದರು.  ನಗರದ ಕೆಎಲ್‌ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಶಾಲಾ ಒಕ್ಕೂಟ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. 

"ನಮ್ಮ ದೃಷ್ಟಿಕೋನ ಸದಾ ಸಕಾರಾತ್ಮಕವಾಗಿರಬೇಕು. ಪ್ರತಿಯೊಬ್ಬರಲ್ಲೂ ಒಳ್ಳೆಯತನವನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಗೌರವಿಸುವ ಉದಾರ ಗುಣವನ್ನು ರೂಢಿಸಿಕೊಳ್ಳಬೇಕು. ಆದರೆ ಇಂದಿನ ಸಮಾಜದಲ್ಲಿ ಹಿರಿಯರಿಗಿಂತ ಸಾಕುಪ್ರಾಣಿಗಳ ಮೇಲಿನ ಮಮತೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತಂದೆ-ತಾಯಿಗಳ ಪ್ರೀತಿ, ತ್ಯಾಗ ಮತ್ತು ಕಾಳಜಿಗೆ ತಕ್ಕ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ," ಎಂದು ಹೇಳಿದರು.  

ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಹೊಂದಿ ಸಾಧನೆಯತ್ತ ಮುನ್ನಡೆಯಬೇಕು. ತಂದೆ-ತಾಯಿಗಳ ನೀರೀಕ್ಷೆಗಳನ್ನು ಈಡೇರಿಸುವಂತೆ ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಸಿ.ಪಿ. ದೇವಋಷಿ ಮಾತನಾಡಿ, ಗಿಲಗಿಂಚಿ ಅರಟಾಳ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುತ್ತಿದ್ದು, ಇಲ್ಲಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ತಿಳಿಸಿದರು.  

ಇದೇ ವೇಳೆ ಪೃಥ್ವಿರಾಜ ಕೊಂಗಾರಿ ಹಾಗೂ ಕಾವೇರಿ ರಾಠೋಡ ಅವರು ಭರತನಾಟ್ಯ ಪ್ರದರ್ಶಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದ್ದು, 9ನೇ ತರಗತಿ ವಿದ್ಯಾರ್ಥಿಗಳು ಸ್ವಾಗತಗೀತೆ ಹಾಡಿದರು.  ಸಿ.ಎಂ. ಪಾಗಾದ ಸ್ವಾಗತಿಸಿದರು. ಎಸ್‌.ಜೆ. ಏಳುಕೋಟಿ ಪರಿಚಯಿಸಿದರು. ಆರ್‌.ಎಸ್‌. ಮಳಕೂರ ಶಾಲಾ ಒಕ್ಕೂಟವನ್ನು ಪರಿಚಯಿಸಿದರು. ಎಸ್‌.ಎಸ್‌. ಹಲವಾಯಿ ಮತ್ತು ಎಸ್‌.ಬಿ. ಕೋರೆ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್‌. ಮಗದುಮ್ಮ ವಂದಿಸಿದರು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ ತೆವರೆ ಹಾಗೂ ಸುಶ್ಮಿತಾ ಬೆಡಸೂರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.