ಕೆ.ಎಚ್‌. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ

ಕೆ.ಎಚ್‌. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ State Women's Commission Chairperson Dr. Nagalakshmi Chaudhary visits K.H. Patil Institute of Medica

ಗದಗ, ಜು.31: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶುಕ್ರವಾರ ಗದಗದ ಕೆ.ಎಚ್‌. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ, ಆಸ್ಪತ್ರೆಯ ವೈದ್ಯಕೀಯ ಸೇವೆಗಳು, ಹೆರಿಗೆ ಮತ್ತು ತಾಯಿ-ಮಗು ಆರೈಕೆ, ನರ್ಸಿಂಗ್ ವಿದ್ಯಾರ್ಥಿನಿಯರ ಕಲ್ಯಾಣ ಹಾಗೂ ಬಿಸಿಎಂ ವಸತಿ ನಿಲಯಗಳ ವ್ಯವಸ್ಥೆಗಳ ಕುರಿತು ಸಮಗ್ರ ಪರೀಶೀಲನೆ ನಡೆಸಿದರು.  

ಪರೀಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ವೈದ್ಯಕೀಯ ಸೇವೆಗಳನ್ನು ಶ್ಲಾಘಿಸಿದರೂ, ಕೆಲವು ಪ್ರಮುಖ ಕೊರತೆಗಳು ಮತ್ತು ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  

ತಾಯಿ ಮರಣ ಪ್ರಮಾಣ ತಗ್ಗಿಸಿರುವ ವಿಶೇಷ ತಂಡಕ್ಕೆ ಮೆಚ್ಚುಗೆಕಳೆದ ಮೂರು ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ತಾಯಿ ಮರಣ ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಿರುವುದು ಶ್ಲಾಘನೀಯ ಸಾಧನೆ ಎಂದು ಡಾ. ಚೌಧರಿ ಹೇಳಿದರು.

ರಕ್ತದೊತ್ತಡ, ಹೆಮರೇಜ್ ಸೇರಿದಂತೆ ತುರ್ತು ಸಮಸ್ಯೆಗಳನ್ನು ನಿಭಾಯಿಸಲು ರಚಿಸಿರುವ ವಿಶೇಷ ತಂಡದ ಕಾರ್ಯಪದ್ಧತಿ ಮಾದರಿಯಾಗಿದ್ದು, ಇದನ್ನು ರಾಜ್ಯದ ಇತರ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲೂ ಜಾರಿಗೆ ತರಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.  

ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಹೆಪಟೈಟಿಸ್ ಲಸಿಕೆ ಕಡ್ಡಾಯ ಕ್ಲಿನಿಕಲ್ ತರಬೇತಿಗೆ ತೆರಳುವ ಮೊದಲು ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ನೀಡಬೇಕಾದ ಹೆಪಟೈಟಿಸ್ ಲಸಿಕೆ ನೀಡದಿರುವುದು ಪರೀಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಈ ನಿರ್ಲಕ್ಷ್ಯ ಗಂಭೀರವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡು ಎಲ್ಲಾ ವಿದ್ಯಾರ್ಥಿನಿಯರಿಗೆ ತಕ್ಷಣ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಬಿಸಿಎಂ ವಸತಿ ನಿಲಯಗಳ ಸಮಸ್ಯೆ ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತಾ ಸೌಲಭ್ಯಗಳ ಕೊರತೆ ಕುರಿತು ದೂರುಗಳು ಬಂದಿವೆ. ಇತ್ತೀಚೆಗೆ ನಡೆದ ಆಹಾರ ವಿಷಬಾಧೆ ಘಟನೆಗಳನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.  

ಹೆಣ್ಣು ಭ್ರೂಣ ಹತ್ಯೆ ಶಂಕೆ ಕೆಲವು ಆಸ್ಪತ್ರೆಗಳಲ್ಲಿ ಗಂಡು ಮಕ್ಕಳ ಜನನ ಪ್ರಮಾಣ ಅಸಹಜವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಕಾನೂನುಬಾಹಿರ ಲಿಂಗಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯ ಸಾಧ್ಯತೆಯನ್ನು ಸೂಚಿಸುತ್ತಿದ್ದು, ಈ ಕುರಿತು ಜಿಲ್ಲಾಡಳಿತದಿಂದ ಸಮಗ್ರ ವರದಿ ಪಡೆಯಲಾಗುವುದು ಎಂದು ಹೇಳಿದರು.  

ಮಹಿಳಾ ಸಿಬ್ಬಂದಿ ಕಲ್ಯಾಣಕ್ಕೆ ಸೂಚನೆ  

ಆಸ್ಪತ್ರೆಯ ‘ಡಿ’ ಗ್ರೂಪ್ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಸಮಾನ ಸೌಲಭ್ಯ, ಕನಿಷ್ಠ ವೇತನ ಮತ್ತು ಮಹಿಳಾ ಸಿಬ್ಬಂದಿಗೆ ಋತುಚಕ್ರ ರಜೆ ಸೇರಿದಂತೆ ಅಗತ್ಯ ಕಲ್ಯಾಣ ಕ್ರಮಗಳನ್ನು ಜಾರಿಗೆ ತರಲು ಸಂಬಂಧಿಸಿದ ಇಲಾಖೆಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.  

ಈ ಸಂದರ್ಭದಲ್ಲಿ ಕೆ.ಎಚ್‌. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.