ಶತಮಾನೋತ್ಸವ ಸಂಭ್ರಮದಲ್ಲೂ ಅನುದಾನ, ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಶ್ರೀ ಉಮಾ ವಿದ್ಯಾಲಯ

ಶತಮಾನೋತ್ಸವ ಸಂಭ್ರಮದಲ್ಲೂ ಅನುದಾನ, ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಶ್ರೀ ಉಮಾ ವಿದ್ಯಾಲಯ  Sri Uma Vidyalaya grappling with a lack of grants and teachers even amidst its centenary celebration

ಲಕ್ಷ್ಮೇಶ್ವರ, ಆ.29: ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ, ಅನುದಾನ ಕೊರತೆ, ಶಿಕ್ಷಕರ ನೇಮಕಾತಿ ವಿಳಂಬ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಸಂಕಷ್ಟ ಎದುರಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.  

ಸೆ.1ರಂದು ಈ ಐತಿಹಾಸಿಕ ಶಾಲೆ ಅಕ್ಷರಶಃ 100 ವರ್ಷಗಳನ್ನು ಪೂರೈಸಲಿದೆ. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ಈ ಸಂಸ್ಥೆ ಲಕ್ಷ್ಮೇಶ್ವರ ಪಟ್ಟಣದ ಹೆಮ್ಮೆಯ ಪ್ರತೀಕವಾಗಿದೆ. ಆದರೆ ಪ್ರಸ್ತುತ ಕೇವಲ ನಾಲ್ವರು ಕಾಯಂ ಹಾಗೂ ಮೂವರು ಅರೆಕಾಲಿಕ ಶಿಕ್ಷಕರ ನೆರವಿನಿಂದ 224 ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಿರ್ವಹಿಸಲಾಗುತ್ತಿದೆ.  

ಪಟ್ಟಣದ ಇತರ ಶಾಲೆಗಳು ಕಡಿಮೆ ಅವಧಿಯಲ್ಲೇ ತಮ್ಮ ಶಾಲಾ ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸುತ್ತಿರುವಾಗ, ನೂರು ವರ್ಷಗಳ ಪರಂಪರೆ ಹೊಂದಿರುವ ಶ್ರೀ ಉಮಾ ವಿದ್ಯಾಲಯದಲ್ಲಿ ಸಂಭ್ರಮದ ವಾತಾವರಣ ಕಾಣದಿರುವುದು ಊರಿನ ಶಿಕ್ಷಣ ಪ್ರೇಮಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ನೋವುಂಟು ಮಾಡಿದೆ.  

ಹಳೆಯ ವಿದ್ಯಾರ್ಥಿಗಳಿಂದ ನೆರವಿಗೆ ಕರೆ  

ಶಾಲೆಯ ಪುನರುಜ್ಜೀವನಕ್ಕೆ ಹಳೆಯ ವಿದ್ಯಾರ್ಥಿಗಳ ಸಂಘವು ಸಕ್ರಿಯವಾಗಿ ಮುಂದಾಗಬೇಕಿದೆ. ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನೆಲೆಸಿರುವ ಸಾವಿರಾರು ಹಳೆಯ ವಿದ್ಯಾರ್ಥಿಗಳು ಒಂದಾಗಿ ಶಾಲೆಯ ಅಭಿವೃದ್ಧಿಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡಬೇಕು ಎಂದು ಮನವಿ ಮಾಡಲಾಗಿದೆ.  

ಸಮುದಾಯದ ಸಹಭಾಗಿತ್ವ ಅಗತ್ಯ  

ಊರಿನ ದಾನಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಅರೆಕಾಲಿಕ ಶಿಕ್ಷಕರ ಗೌರವಧನಕ್ಕೆ ನೆರವಾಗಬೇಕು. ಶಾಲೆಯ ಶತಮಾನೋತ್ಸವವನ್ನು ಕೇವಲ ಉತ್ಸವಕ್ಕೆ ಸೀಮಿತಗೊಳಿಸದೆ, ಸಂಸ್ಥೆಯ ಭವಿಷ್ಯವನ್ನು ಭದ್ರಪಡಿಸುವ ದೀರ್ಘಕಾಲೀನ ‘ಎಂಡೋಮೆಂಟ್ ಫಂಡ್‌’ ಸ್ಥಾಪನೆಗೆ ಮುಂದಾಗಬೇಕು ಎಂಬ ಆಗ್ರಹವೂ ಕೇಳಿಬಂದಿದೆ.  

ಸರ್ಕಾರದ ಮೇಲೂ ಒತ್ತಡ ಅಗತ್ಯ  

ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಅಗತ್ಯ ಆರ್ಥಿಕ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಮೇಲೆ ಸಂಘಟಿತ ಒತ್ತಡ ಹೇರಬೇಕಾಗಿದೆ. ನೂರು ವರ್ಷಗಳ ಕಾಲ ಜ್ಞಾನ ದಾಸೋಹ ಮಾಡಿದ ಈ ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಲಕ್ಷ್ಮೇಶ್ವರದ ಪ್ರತಿಯೊಬ್ಬ ನಾಗರಿಕನ ನೈತಿಕ ಹೊಣೆಗಾರಿಕೆಯಾಗಿದೆ.  

ಶತಮಾನೋತ್ಸವದ ಸಂಭ್ರಮದ ನೆಪದಲ್ಲಿ ಕೇವಲ ಕಾರ್ಯಕ್ರಮ ಆಯೋಜಿಸುವುದಕ್ಕಿಂತ, ಶಾಲೆಯ ಮುಂದಿನ ಪೀಳಿಗೆಗಳ ಭವಿಷ್ಯಕ್ಕಾಗಿ ಶಾಶ್ವತ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ನಿಜವಾದ ಶತಮಾನೋತ್ಸವ ಆಚರಣೆಯಾಗಲಿದೆ.