ಡಾ.ಬಾಬುಜಗಜೀವನ ರಾಂ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯಿಂದ ಸಮಾಜವು ಪ್ರಗತಿಪರವಾಗಿದೆ: ಮಹಾದೇವ ಹರಿಜನ

ಡಾ.ಬಾಬುಜಗಜೀವನ ರಾಂ  ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯಿಂದ ಸಮಾಜವು ಪ್ರಗತಿಪರವಾಗಿದೆ: ಮಹಾದೇವ ಹರಿಜನ Society has become progressive due to Dr. Babujagjivan Ram's vision and social concern: Mahadev Hari

ಧಾರವಾಡ 04: ದೇಶದ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯಿಂದಸಮಾಜವು ಪ್ರಗತಿಪರ ಮಾರ್ಗದಲ್ಲಿ ಸಾಗಲು, ಸದೃಡ ಶಕ್ತಿಯುತ ರಾಷ್ಟ್ರವಾಗಿ ಭಾರತ ಬೆಳೆಯಲು ಸಾಧ್ಯವಾಗಿದೆ ಎಂದು ಹುಬ್ಬಳ್ಳಿಯ ಎಸ್‌.ಜೆ.ಎಂ.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹಾದೇವ ಹರಿಜನ ಅವರು ಹೇಳಿದರು.

ಅವರು ಇಂದು (ಏ.4) ಸಂಜೆ ಧಾರವಾಡ ನಗರದ ಸನ್ಮತಿ ಮಾರ್ಗದ ಹತ್ತಿರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ, ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಜಯಂತಿ ಆಚರಣೆಯ ಅಂಗವಾಗಿ ವಿಚಾರಗೋಷ್ಠಿ ಮಾತನಾಡಿದರು.  

ಬಾಬು ಜಗಜೀವನ ರಾಂ ಅವರು ನಮ್ಮ ದೇಶದ ಸಾಮಾಜಿಕ ಸುಧಾರಣೆಗೆ, ಮಹಿಳಾ ಶಿಕ್ಷಣಕ್ಕೆ, ಅಲ್ಪಸಂಖ್ಯಾತ ಹಕ್ಕುಗಳಿಗೆ, ಮತ್ತು ಪರಿಸರ ಸಂರಕ್ಷಣೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಅವರು ಹೇಳಿದರು. ದೇಶದ ಪ್ರಗತಿಯು ನಿತ್ಯದ ಶ್ರಮ, ಸಮಗ್ರ ಯೋಜನೆ ಮತ್ತು ಸಮುದಾಯದ ಸಹಕಾರದ ಮೂಲಕ ಸಾಧ್ಯ ಎಂಬುದನ್ನು ಬಾಬು ಜಗಜೀವನ ರಾಂ ಅವರು ತಿಳಿಸಿದ್ದರು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಅವರು ಮಾತನಾಡಿ, ದಲಿತರ ಮತ್ತು ಹಿಂದುಳಿದ ವರ್ಗಗಳ ಬದುಕಿಗೆ ಬೆಳಕಾದ ಮಹಾನ ನಾಯಕರು ತಮ್ಮ ದಯಾಮಯ ವ್ಯಕ್ತಿತ್ವದಿಂದ ಸಮಾಜದ ನೊಂದವರ ಕಣ್ಣೀರನ್ನು ಒರೆಸಿದವರು. 

 ಬಡವರ ಹಿತಕ್ಕಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ರೂಪಿಸುವ ಮೂಲಕ ಅವರು ಜನರ ಜೀವನದಲ್ಲಿ ಆಶಾಕಿರಣವಾಗಿ ಕಂಗೊಳಿಸಿದರು ಎಂದು ಹೇಳಿದರು.ಆಹಾರ ಭದ್ರತೆ, ಸಮಾನತೆ ಮತ್ತು ನ್ಯಾಯಕ್ಕಾಗಿ ಸದಾ ಹೋರಾಟ ನಡೆಸಿದ ಅವರು, ತಮ್ಮ ಚಿಂತನೆಗಳ ಮೂಲಕ ಸಮಾಜದ ಪ್ರಗತಿಗೆ ದಾರೀದೀಪವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜಯ ಎನ್‌., ಮಹಾದೇವ ಹುಲಗಜ್ಜಿ ಉಪಸ್ಥಿತರಿದ್ದರು.ಸಮಾಜ ಕಲ್ಯಾಣ ಇಲಾಖೆಯ ಎಂ.ಬಿ. ಸನ್ನೇರಿ ಅವರು ಸ್ವಾಗತಿಸಿ,ವಂದಿಸಿದರು ಹಾಗೂ ಪ್ರವೀಣ ಮಸಕಿ ಅವರು ಕಾರ್ಯಕ್ರಮ ನಿರೂಪಿಸಿದರು. ವಿಚಾರಗೋಷ್ಠಿಯಲ್ಲಿ ಸಮಾಜದ ಪ್ರಮುಖರು, ದಲಿತ ಚಿಂತಕರು,ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದ ಹಿರಿಯರು, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.