ಸ್ವಾವಲಂಬಿ ಜೀವನಕ್ಕೆ ಕೌಶಲ್ಯಾಭಿವೃದ್ದಿ ಮುಖ್ಯ: ಸಮ್ರಿನ ಮುಲ್ಲಾ

ಸ್ವಾವಲಂಬಿ ಜೀವನಕ್ಕೆ ಕೌಶಲ್ಯಾಭಿವೃದ್ದಿ ಮುಖ್ಯ: ಸಮ್ರಿನ ಮುಲ್ಲಾ Skill development is key to a self-reliant life: Samrina Mulla

ಲೋಕದರ್ಶನ ವರದಿ 

ಬೆಳಗಾವಿ 13: ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಕೌಶಲ್ಯ ಅಭಿವೃಧ್ಧಿ ತರಬೇತಿಗಳು ಅತೀ ಮುಖ್ಯ ಪಾತ್ರ ವಹಿಸುತ್ತವೆ ಕಾರಣ ಅವುಗಳನ್ನು ಸರಿಯಾಗಿ ಸದುಪಯೋಗ ಪಡೆಸಿಕೊಂಡು ಜೀವನ ನಿರ್ವಹಿಸುವುದು ಮುಖ್ಯವಾಗಿದೆ ಎಂದು ವೇಗಾ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಸಮ್ರಿನ ಮುಲ್ಲಾ ಅಭಿಪ್ರಾಯಪಟ್ಟರು. 

ಕ್ವಾಲಿಟಿ ಎನಿಮಲ್ ಫೀಡ್ಸ್‌ ಪ್ರೈವೆಟ ಲಿಮಿಟೆಡ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ತೀರ್ಥಕುಂಡೆ ಗ್ರಾಮದಲ್ಲಿ ಜರುಗಿದ 4 ತಿಂಗಳ ಹೊಲಿಗೆ ತರಬೇತಿಯ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಅತಿಥಿ ವೇಗಾ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ವಿನೋದ ಲಮಾಣಿ ಮಾತನಾಡಿ ವೇಗಾ ಕಂಪನಿಯಲ್ಲಿ ಹೊಲಿಗೆ ಕಾರ್ಯಕ್ಕೆ ಉದ್ಯೋಗ ಅವಕಾಶಗಳಿವೆ. ತಾವುಗಳು ಹೊಲಿಗೆ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದಿದ್ದಿರಿ. ಕಾರಣ ತಮ್ಮ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರುವ ಆಸಕ್ತಿ ಇದ್ದರೆ ನಾವು ತಮ್ಮನ್ನು ಪರಿಗಣಿಸಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಇಂತಹ ತರಬೇತಿಗಳು ಅತ್ಯಂತ ಉಪಯುಕ್ತವಾಗಿದ್ದು ಮಹಿಳೆಯರು ತಮ್ಮ ಕೌಶಲ್ಯವನ್ನು ಉದ್ಯೋಗ ಹಾಗೂ ಸ್ವ-ಉದ್ಯೋಗಕ್ಕೆ ಬಳಸಿಕೊಳ್ಳುವಂತೆ ಕರೆ ನೀಡಿದರು. 

ಕರ್ನಾಟಕ ಪಬ್ಲಿಕ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯ ಮುಖಂಡರಾದ ಮಹಾದೇವ ಬನ್ನೂರ, ಮಹಿಳಾ ಕಲ್ಯಾಣ ಸಂಸ್ಥೆಯ ಮಧು ರೋಖಡೆ ಹಾಗೂ ಟೆಲರಿಂಗ ತರಬೇತಿಯ ತರಬೇತುದಾರ ದೀಪಾ ಹಿರೇಮಠ ಉಪಸ್ಥಿತರಿದ್ದರು. ತರಬೇತಿ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.