ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ ಎಂ.ವಿ. ಕೊಡುಗೆ ಅಪಾರ: ಡಾ. ಎಚ್‌. ಮಹಾಬಲೇಶ್ವರ

ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ ಎಂ.ವಿ. ಕೊಡುಗೆ ಅಪಾರ: ಡಾ. ಎಚ್‌. ಮಹಾಬಲೇಶ್ವರ  Sir M.V.'s contribution to the field of technology is immense: Dr. H. Mahabaleshwar


ಬಳ್ಳಾರಿ, ಸೆ.16: ಕನ್ನಡ ನಾಡಿಗೆ ಮಾತ್ರವಲ್ಲದೆ ದೇಶದ ಅಭಿವೃದ್ಧಿ ಕ್ಷೇತ್ರಕ್ಕೂ ಅಪಾರ ಸೇವೆ ಸಲ್ಲಿಸಿದ ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಆರ್‌.ವೈ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್‌. ಮಹಾಬಲೇಶ್ವರ ಹೇಳಿದರು.  

ನಗರದಲ್ಲಿ ಜಿಲ್ಲಾ ಕಸಾಪ ಹಾಗೂ ರಾಷ್ಟ್ರೀಯ ಬಸವದಳದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ವಿಶ್ವೇಶ್ವರಯ್ಯ ಅವರು ಪ್ರತಿಭಾವಂತ ಇಂಜಿನಿಯರ್ ಆಗಿದ್ದಷ್ಟೇ ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ಬ್ಯಾಂಕ್, ಎಚ್‌ಎಎಲ್, ಕನ್ನಂಬಾಡಿ ಅಣೆಕಟ್ಟು, ಭದ್ರಾವತಿ ಉಕ್ಕಿನ ಕಾರ್ಖಾನೆ ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ಕೈಗಾರಿಕೆಗಳ ನಿರ್ಮಾಣಕ್ಕೆ ಕಾರಣರಾದರು. ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸು ಕಂಡ ಅವರು, ಹಲವು ಯೋಜನೆಗಳನ್ನು ಸರ್ಕಾರದ ಮೂಲಕ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.  

ಇಂಜಿನಿಯರ್ ಟಿ. ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿ, ವಿಶ್ವೇಶ್ವರಯ್ಯ ಅವರ ಪ್ರತಿಭೆ, ಜೀವನ ಮತ್ತು ಸಾಧನೆ ದೇಶದ ಎಲ್ಲ ತಾಂತ್ರಿಕ ಪರಿಣತರಿಗೆ ಆದರ್ಶವಾಗಿದೆ ಎಂದು ಹೇಳಿದರು.