ಮುಗಳಿ ಗ್ರಾಮ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್

ಮುಗಳಿ ಗ್ರಾಮ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್  Sincere effort for comprehensive development of Mugali village: MLA Yasir Ahmed Khan Pathan


ಶಿಗ್ಗಾವಿ 30 : ಮುಗಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ತಾವು ಹಾಕಿಕೊಟ್ಟ ಹಾದಿಯಲ್ಲಿ ಸಾಗುವುದಾಗಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.  

ತಾಲೂಕಿನ ಮುಗಳಿ ಗ್ರಾಮದಲ್ಲಿ 11.50 ಲಕ್ಷ ವೆಚ್ಚದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದ ಮುಂದುವರಿದ ಕಾಮಗಾರಿ, 35 ಲಕ್ಷ ವೆಚ್ಚದಲ್ಲಿ ಸಿಸಿ ಕಾಲುವೆ ನಿರ್ಮಾಣ ಕಾಮಗಾರಿ ಹಾಗೂ 20 ಲಕ್ಷ ವೆಚ್ಚದಲ್ಲಿ ಗಣಪತಿ ದೇವಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.  

ಗ್ರಾಮದ ಆರಾಧ್ಯ ದೈವ ಶ್ರೀ ಕಲ್ಲೇಶ್ವರ ದೇವಾಲಯ ನಿರ್ಮಾಣಕ್ಕೂ ತಮ್ಮೊಂದಿಗೆ ಕೈಜೋಡಿಸುವುದಾಗಿ ತಿಳಿಸಿದ ಅವರು, ಮುಂಬರುವ ದೀಪಾವಳಿ ವೇಳೆಗೆ ದೇವಾಲಯ ನಿರ್ಮಾಣಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸದಾ ತಮ್ಮೊಂದಿಗೆ ಇರುವುದಾಗಿ ಹೇಳಿದರು.  

ಮಾಜಿ ಸಂಸದ ಮಂಜುನಾಥ ಕುನ್ನೂರು ಮಾತನಾಡಿ, ಪಠಾಣ್ ಅವರು ಅಲ್ಪಸಂಖ್ಯಾತ ಶಾಸಕರಾಗಿದ್ದರೂ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 400 ದೇವಾಲಯಗಳಿಗೆ ಅನುದಾನ ಒದಗಿಸಿದ್ದಾರೆ. ಜಾತಿ, ಧರ್ಮ ನೋಡದೆ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಯುವ ಉತ್ಸಾಹ ಹೊಂದಿರುವ ಅವರಿಂದ ಅನುದಾನ ಪಡೆದು ಮುಗಳಿ ಗ್ರಾಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಶಿವಾನಂದ ರಾಮಗೇರಿ, ಶಂಭುಲಿಂಗಪ್ಪ ರಾಮಗೇರಿ, ಶಿವಪ್ಪ ದುಂಡಪ್ಪನವರ್, ಬಸಪ್ಪ ಭದ್ರಶೆಟ್ಟಿ, ಯಲ್ಲಪ್ಪ ಅರಳಿಕಟ್ಟಿ, ಮಹಾದೇವಪ್ಪ ಕಾಮನಹಳ್ಳಿ, ಬಸನಗೌಡ ಪಾಟೀಲ, ಬಸವರಾಜ ಪೂಜಾರ, ಮೌಲಾಸಾಬ್ ಓಲೇಕಾರ, ಶಿವಾನಂದ ಬಿಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ನಿಂಗಪ್ಪ ಸಕ್ರಿ ನಿರೂಪಿಸಿದರು. ಚಂದ್ರು ಬಡಿಗೇರ್ ಸ್ವಾಗತಿಸಿದರು. ಗುರುನಾಥ ಹುಬ್ಬಳ್ಳಿ ವಂದಿಸಿದರು.