ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ಮಹತ್ವದ ಸಾಧನೆ; ಉತ್ತರ ಕರ್ನಾಟಕದ ಮಕ್ಕಳಿಗೆ ಹೊಸ ಆಶಾಕಿರಣ
Significant achievement by KLE Cancer Hospital; a new ray of hope for children in North Karnataka
ಲೋಕದರ್ಶನ ವರದಿ
ಒಂದು ವರ್ಷದಲ್ಲಿ 8 ಮಕ್ಕಳಿಗೆ ಯಶಸ್ವಿ ಬೋನ್ ಮ್ಯಾರೋ ಕಸಿ
ಬೆಳಗಾವಿ, ಜುಲೈ 11: ಉತ್ತರ ಕರ್ನಾಟಕದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಆಸ್ಪತ್ರೆಯ ಮಕ್ಕಳ ಹೀಮಾಟೋ-ಆಂಕಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಬಿಎಂಟಿ) ವಿಭಾಗವು ಕಳೆದ ಒಂದು ವರ್ಷದಲ್ಲಿ 8 ಮಕ್ಕಳಿಗೆ ಯಶಸ್ವಿಯಾಗಿ ಬೋನ್ ಮ್ಯಾರೋ ಕಸಿ ಚಿಕಿತ್ಸೆ ನಡೆಸಿದ್ದು, ಶೇ.100 ತಾಂತ್ರಿಕ ಯಶಸ್ಸು ದಾಖಲಿಸಿದೆ.
ಮಕ್ಕಳ ಹೀಮಾಟೋ-ಆಂಕಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಅಭಿಲಾಷಾ ಅವರ ನೇತೃತ್ವದ ವೈದ್ಯರ ತಂಡವು ಜನ್ಮಜಾತ ಅಮೆಗಾಕ್ಯಾರಿಯೊಸೈಟಿಕ್ ಥ್ರೊಂಬೋಸೈಟೋಪೀನಿಯಾ, ಫ್ಯಾಮಿಲಿಯಲ್ ಹೆಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (ಎಚ್‌ಎಲ್‌ಎಚ್), ಮರುಕಳಿಸಿದ ಹಾಗೂ ಚಿಕಿತ್ಸೆಗೆ ಸ್ಪಂದಿಸದ ತೀವ್ರ ಲಿಂಫೋಬ್ಲಾಸ್ಟಿಕ್ ಲ್ಯೂಕೇಮಿಯಾ ಸೇರಿದಂತೆ ಹಲವು ಸಂಕೀರ್ಣ ಕಾಯಿಲೆಗಳಿಗೆ ಯಶಸ್ವಿಯಾಗಿ ಬೋನ್ ಮ್ಯಾರೋ ಕಸಿ ಚಿಕಿತ್ಸೆ ನೀಡಿದೆ.
ಒಟ್ಟು ಎಂಟು ಕಸಿ ಚಿಕಿತ್ಸೆಗಳ ಪೈಕಿ ಎರಡು ಹ್ಯಾಪ್ಲೊಐಡೆಂಟಿಕಲ್ ಬೋನ್ ಮ್ಯಾರೋ ಕಸಿ ಚಿಕಿತ್ಸೆಗಳು ನಡೆದಿವೆ. ಇಂತಹ ಚಿಕಿತ್ಸೆಗಳು ಅತ್ಯಂತ ಸಂಕೀರ್ಣವಾಗಿದ್ದು, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಪರಿಣಿತ ವೈದ್ಯಕೀಯ ತಂಡದ ಅಗತ್ಯವಿರುತ್ತದೆ. ಈ ಎರಡೂ ಮಕ್ಕಳು ಚಿಕಿತ್ಸೆಯ ನಂತರ ಆರೋಗ್ಯವಾಗಿದ್ದು, ಉತ್ತಮ ಚೇತರಿಕೆ ಕಂಡಿದ್ದಾರೆ.
ಚಿಕಿತ್ಸೆ ಪಡೆದ 8 ಮಕ್ಕಳಲ್ಲಿ 7 ಮಕ್ಕಳು ಸಂಪೂರ್ಣ ರೋಗಮುಕ್ತರಾಗಿ ನಿಯಮಿತ ವೈದ್ಯಕೀಯ ತಪಾಸಣೆಯೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಮುಂದುವರಿದ ಹಂತದ ನ್ಯೂರೋಬ್ಲಾಸ್ಟೊಮಾ ಕಾಯಿಲೆಗೆ ಕಸಿ ಚಿಕಿತ್ಸೆ ಪಡೆದ ಒಬ್ಬ ಮಗುವಿನಲ್ಲಿ ಚಿಕಿತ್ಸೆ ತಾಂತ್ರಿಕವಾಗಿ ಯಶಸ್ವಿಯಾಗಿದ್ದರೂ, ಬಳಿಕ ಕಾಯಿಲೆ ಮರುಕಳಿಸಿದೆ. ಇದು ಕೆಲವು ಬಾಲ್ಯ ಕ್ಯಾನ್ಸರ್‌ಗಳ ತೀವ್ರ ಸ್ವರೂಪವನ್ನು ಹಾಗೂ ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ಮತ್ತು ನವೀನ ಚಿಕಿತ್ಸೆಗಳ ಅಗತ್ಯವನ್ನು ತೋರಿಸುತ್ತದೆ.
ಬೋನ್ ಮ್ಯಾರೋ ಕಸಿ ಚಿಕಿತ್ಸೆ ವೈದ್ಯಕೀಯ ಕ್ಷೇತ್ರದ ಅತ್ಯಂತ ಸಂಕೀರ್ಣ ಚಿಕಿತ್ಸೆಗಳಲ್ಲೊಂದಾಗಿದ್ದು, ಇದಕ್ಕಾಗಿ ವಿಶೇಷ ಕಸಿ ಘಟಕ, ಅನುಭವಿ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಸುಸಜ್ಜಿತ ರಕ್ತ ಬ್ಯಾಂಕ್ ಹಾಗೂ ತೀವ್ರ ನಿಗಾ ಸೌಲಭ್ಯಗಳ ಅಗತ್ಯವಿರುತ್ತದೆ. ಈ ಚಿಕಿತ್ಸೆಗಳು ಸಾಮಾನ್ಯವಾಗಿ ಮಹಾನಗರಗಳಲ್ಲಷ್ಟೇ ಲಭ್ಯವಾಗುತ್ತಿದ್ದವು.
ಉತ್ತರ ಕರ್ನಾಟಕದ ಮಕ್ಕಳಿಗೂ ತಮ್ಮದೇ ಭಾಗದಲ್ಲಿ ವಿಶ್ವಮಟ್ಟದ ಚಿಕಿತ್ಸೆ ದೊರೆಯಬೇಕು ಎಂಬ ದೂರದೃಷ್ಟಿಯೊಂದಿಗೆ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪರಿಣಾಮವಾಗಿ ನೂರಾರು ಕಿಲೋಮೀಟರ್ ದೂರದ ಮಹಾನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಿದ್ದು, ಮಕ್ಕಳಿಗೆ ಸ್ಥಳೀಯವಾಗಿಯೇ ಜೀವ ರಕ್ಷಕ ಚಿಕಿತ್ಸೆ ಲಭ್ಯವಾಗುತ್ತಿದೆ.
ಆಸ್ಪತ್ರೆಯು ಆಯುಷ್ಮಾನ್ ಭಾರತ್ ಸೇರಿದಂತೆ ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳ ಅಡಿಯಲ್ಲಿ ಸೇವೆ ನೀಡುತ್ತಿದ್ದು, ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸ್ವಯಂಸೇವಾ ಸಂಸ್ಥೆಗಳ ಸಹಯೋಗದ ಮೂಲಕ ಬಡ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು, ಪೌಷ್ಟಿಕ ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಆಸ್ಪತ್ರೆಯ ಧರ್ಮಾರ್ಥ ವಿಭಾಗದಲ್ಲಿ ವಿಶೇಷ ಮಕ್ಕಳ ಕ್ಯಾನ್ಸರ್ ವಾರ್ಡ್ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
2017ರಲ್ಲಿ ಆರಂಭವಾದ ಕೆಎಲ್‌ಇ ಮಕ್ಕಳ ಹೀಮಾಟೋ-ಆಂಕಾಲಜಿ ಕೇಂದ್ರವು ಉತ್ತರ ಕರ್ನಾಟಕದ ಮೊದಲ ವಿಶೇಷ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿದೆ. ಇದುವರೆಗೆ 900ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಯ ಯಶಸ್ಸಿನ ಪ್ರಮಾಣ ದೇಶದ ಪ್ರಮುಖ ಮಕ್ಕಳ ಕ್ಯಾನ್ಸರ್ ಕೇಂದ್ರಗಳ ಮಟ್ಟಕ್ಕೆ ಸಮನಾಗಿದೆ. ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ವಿಶೇಷ ಮಕ್ಕಳ ಬೋನ್ ಮ್ಯಾರೋ ಕಸಿ ಕಾರ್ಯಕ್ರಮ ಹೊಂದಿರುವ ಏಕೈಕ ಕೇಂದ್ರವಾಗಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಗುರುತಿಸಿಕೊಂಡಿದೆ.
ಈ ಸಾಧನೆ ಕುರಿತು ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ದೇಸಾಯಿ ಮಾತನಾಡಿ, “ಪ್ರತಿಯೊಂದು ಯಶಸ್ವಿ ಬೋನ್ ಮ್ಯಾರೋ ಕಸಿ ಒಂದು ವೈದ್ಯಕೀಯ ಸಾಧನೆ ಮಾತ್ರವಲ್ಲ; ಅದು ಒಂದು ಮಗುವಿಗೆ ಹೊಸ ಜೀವನ ನೀಡುವ ಹಾಗೂ ಒಂದು ಕುಟುಂಬಕ್ಕೆ ಹೊಸ ಭರವಸೆ ಮೂಡಿಸುವ ಮಹತ್ವದ ಕ್ಷಣವಾಗಿದೆ. ಉತ್ತರ ಕರ್ನಾಟಕದ ಪ್ರತಿಯೊಬ್ಬ ಮಗುವಿಗೂ ವಿಶ್ವಮಟ್ಟದ ಕ್ಯಾನ್ಸರ್ ಚಿಕಿತ್ಸೆ ಒದಗಿಸುವುದು ನಮ್ಮ ಬದ್ಧತೆಯಾಗಿದೆ,” ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 