ರಾಷ್ಟ್ರೀಯ ಗೀತೆಗೆ ಗೌರವ ನೀಡಿ: ಕಾಂಗ್ರೆಸ್ ವಿರುದ್ಧ ಬಿಜೆಪಿಗರ ಆಕ್ರೋಶ

ರಾಷ್ಟ್ರೀಯ ಗೀತೆಗೆ ಗೌರವ ನೀಡಿ: ಕಾಂಗ್ರೆಸ್ ವಿರುದ್ಧ ಬಿಜೆಪಿಗರ ಆಕ್ರೋಶ Show respect for the national anthem: BJP members' outrage against Congress

  

ಶಿಗ್ಗಾವಿ, ಆ.19: ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಗೀತೆಗೆ ಅಗೌರವ ತೋರಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಬಿಜೆಪಿ ಮಂಡಳದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.  

ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ‘ವಂದೇ ಮಾತರಂ’ ಕೇವಲ ಒಂದು ಗೀತೆಯಲ್ಲ. ಅದು ಭಾರತದ ಸ್ವಾತಂತ್ರ್ಯ ಹೋರಾಟ, ದೇಶಭಕ್ತಿ ಹಾಗೂ ರಾಷ್ಟ್ರೀಯ ಭಾವನೆಯೊಂದಿಗೆ ಬೆಸೆದುಕೊಂಡಿರುವ ಮಹತ್ವದ ಗೀತೆಯಾಗಿದೆ. ಸ್ವಾತಂತ್ರ್ಯೋತ್ಸವದಂದು ಕಾಂಗ್ರೆಸ್ ಕಚೇರಿಯಲ್ಲಿ ‘ವಂದೇ ಮಾತರಂ’ ಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.  

ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಯಾವುದೇ ಸ್ಪಷ್ಟ ಖಂಡನೆ ಅಥವಾ ಕ್ಷಮೆಯಾಚನೆ ಮಾಡದಿರುವುದು ಖೇದಕರ. ರಾಷ್ಟ್ರೀಯ ಗೀತೆ ಹಾಗೂ ದೇಶದ ಪ್ರತೀಕಗಳಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ‘ವಂದೇ ಮಾತರಂ’ ಗೀತೆಗೆ ಅಗೌರವ ತೋರಿದ ಘಟನೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ತಾಲೂಕು ಬಿಜೆಪಿ ಮಂಡಳದ ಅಧ್ಯಕ್ಷ ವಿಶ್ವನಾಥ ಹರವಿ, ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ, ಶಿವಯೋಗಿ ಹುಲಸೋಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ ರಾಮಗೇರಿ, ಅನಿಲ್ಕುಮಾರ ಸಾತಣ್ಣವರ, ಸಚಿನ್ ಮಡಿವಾಳರ, ರವಿ ಬಿಶೆಟ್ಟಿ, ದೇವು ಸೊರಟೂರ, ಬಾಹುಬಲಿ ಅಕ್ಕಿ, ಚಂದ್ರು ಆಚೇಬನದ, ಬಸವರಾಜ ಕಲ್ಲಪ್ಪನವರ, ಗುರುರಾಜ ಹೊನ್ನನವರ, ಯಶೋಧಾ ಪಾಟೀಲ, ಸಂತೋಷ ದೊಡ್ಡಮನಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.