ಬೆಂಗಳೂರು/ಮಂಗಳೂರು, ನ. 9: ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸಮಾಡಿದ್ದು ತಪ್ಪು ಎಂದ ಮೇಲೆ ಅದಕ್ಕೆ ಪರಿಹಾರ ಕೊಡಬೇಕಲ್ಲವೇ ? ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀಪು ಕುರಿತು ಪ್ರತಿಕ್ರಿಯಿಸಿದ ದೇವೇಗೌಡ, ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು, ಅದಕ್ಕಾಗಿ ಅನೇಕ ಮಂದಿ ಹೋರಾಡಿದ್ದಾರೆ. ನ್ಯಾಯಾಲಯ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬಹುದಿತ್ತು ಎಂದ ಅವರು, ಕೊನೆಯದಾಗಿ ನ್ಯಾಯಾಲಯದ ತೀಪು ಸ್ವಾಗತಿಸುವುದಾಗಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಎಚ್.ಡಿ.ಕುಮಾರಸ್ವಾಮಿ, ಅನ್ನದಾತರ ಮುಂದೆ ಬೇರೆ ಯಾವ ದೇವರೂ ಇಲ್ಲ. ರಾಮಮಂದಿರ ನಿರ್ಮಾಣದ ಜೊತೆಗೆ ಅನ್ನದಾತರಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಬಿಜೆಪಿಗರ ಕಾಲೆಳೆದಿದ್ದಾರೆ. ಲಂಡನ್ ಪ್ರವಾಸದಲ್ಲಿಯೇ ಇರುವ ಕುಮಾರಸ್ವಾಮಿ, ಅಲ್ಲಿಂದಲೇ ಟ್ವೀಟ್ ಮಾಡಿದ್ದಾರೆ. ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಬೇಕು. ಎಂದಿನಂತೆ ಸಾಮರಸ್ಯದಿಂದ ಬದುಕಿ ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ. ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಸೆಡ್ಡು ಹೊಡೆದಿರುವ ದೇವೇಗೌಡ, ಮಹಾಲಕ್ಷ್ಮೀ ಬಡಾವಣೆಯ ಕುರುಬರಹಳ್ಳಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಜೆಡಿಎಸ್ ಸ್ವಾಭಿಮಾನಿ ಸಮಾವೇಶ ಮುಂದೂಡಿದ್ದಾರೆ. ಲಂಡನ್ ಪ್ರವಾಸದಿಂದ ಕುಮಾರಸ್ವಾಮಿ ಬೆಂಗಳೂರಿಗೆ ಇನ್ನೂ ಹಿಂದಿರುಗದ ಕಾರಣ ಸಮಾವೇಶ ಮುಂದೂಡಿಕೆಯಾಗಿದೆ. ಇತ್ತ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದ್ದ ದೇವೇಗೌಡ ಸಹ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಮಂಗಳೂರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಚಲನವಲನ ಪಕ್ಷಸಂಘಟನೆ ಕುರಿತು ಅವಲೋಕಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಮ್ಮ ಪಕ್ಷದಿಂದ ಹದಿನಾಲ್ಕು ಅಭ್ಯರ್ಮಿಗಳು ಸ್ಪರ್ದೇ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಉತ್ಸಾಹವದಿಂದ ಕೆಲಸ ಮಾಡುತ್ತಿದ್ದು, ಕಳೆದ ಬಾರಿ ಪಕ್ಷಕ್ಕೆ ಕೆಲ ಸ್ಥಾನ ಬಂದಿತ್ತು. ಈ ಹಿಂದೆಯೂ ಇಲ್ಲಿ ಪಕ್ಷ ಗೆದ್ದಿತ್ತು. ಮುಖಂಡರ ಆಹ್ವಾನದಂತೆ ಕಾರ್ಯಕರ್ತರನ್ನು ಹರಿದುಂಬಿಸಲು ಮಂಗಳೂರಿಗೆ ಆಗಮಿಸಿರುವುದಾಗಿ ಹೇಳಿದರು. ರಾಜ್ಯದಲ್ಲಿ ಉಪ ಚುನಾವಣೆ ಸ್ಪರ್ದೇ ವಿಚಾರವಾಗಿ ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ತೀಪು ಯಾವುದೇ ತೀಪು ನೀಡಿದರೂ ಪಕ್ಷ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಉಪಚುನಾವಣೆಯಲ್ಲಿ ಪಕ್ಷಕ್ಕೆ ತೃಪ್ತಿಕರವಾದ ಫಲಿತಾಂಶ ಬರುತ್ತದೆ ಎಂಬುದು ತಮ್ಮ ನಂಬಿಕೆಯಿದೆ. ಬಿಜೆಪಿ ಜೊತೆಗೂ ಮೈತ್ರಿ ಮಾಡಿಕೊಳ್ಳವುದಿಲ್ಲ. ಜೆಡಿಎಸ್ ಕಿಂಗ್ ಮೇಕರ್ ಎಂಬುದೇನೂ ಇಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಎಷ್ಟು ಬವಣೆ ಪಟ್ಟಿದ್ದಾರೆಂಬ ಅನುಭವವೇ ಸಾಕು. ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಸ್ಪಷ್ಟಪಡಿಸಿದರು. ಕುಮಾರಸ್ವಾಮಿ ರೈತರ ಸಾಲಮನ್ನಾ ಪ್ರಸ್ತಾಪ ಮಾಡಿದಾಗ ಕಾಂಗ್ರೆಸ್, ಬಿಜೆಪಿ ನಾಯಕರು ಅಪಹಾಸ್ಯ ಮಾಡಿದ್ದರು. ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮೂದಲಿಸಿದ್ದರು. ಆದರೆ, ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ ಮಾತ್ರ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 72 ಸಾವಿರ ಮಂದಿ ಸಾಲಮನ್ನಾ ಲಾಭ ಪಡೆದಿದ್ದಾರೆ. ಎರಡು ಜಿಲ್ಲೆಗಳಿಗೆ ಸಾಲಮನ್ನಾಕ್ಕಾಗಿ 580 ಕೋಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದವರು ಯಾರು? ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಅವರ ಹಿಂದಿನ ಹೇಳಿಕೆಯನ್ನು ಪರೋಕ್ಷವಾಗಿ ಕುಟುಕಿದ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಮೇಲೆ ಶತ್ರುತ್ವ ಇಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು.