ಶಿವಾನಂದ ಮ್ಯಾಗೇರಿ ಎಲ್ಲರ ಮೆಚ್ಚುಗೆಗೆ ಪಾತ್ರ: ಬೊಮ್ಮಾಯಿ

ಶಿವಾನಂದ ಮ್ಯಾಗೇರಿ ಎಲ್ಲರ ಮೆಚ್ಚುಗೆಗೆ ಪಾತ್ರ: ಬೊಮ್ಮಾಯಿ  Shivananda Mageri wins everyone's appreciation: Bommai


ಶಿಗ್ಗಾವಿ, ಸೆ.20: ಇಂದಿನ ದಿನಗಳಲ್ಲಿ ಶ್ರೀಮಂತಿಕೆ ಎನ್ನುವುದು ಹಣ-ಸಂಪತ್ತಿನಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಸಾರ್ವಜನಿಕರೊಂದಿಗೆ ಆತ್ಮೀಯತೆ ಹಾಗೂ ಪ್ರಾಮಾಣಿಕ ಸೇವೆಯಿಂದಲೂ ವ್ಯಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಬಹುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.  ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಸಾಹಿತಿ ಶಿವಾನಂದ ಮ್ಯಾಗೇರಿ ಅವರ 54ನೇ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾನಂದ ಮ್ಯಾಗೇರಿ ಅವರು ಈ ಕ್ಷೇತ್ರದ ಸರಸ್ವತಿ ಪುತ್ರ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಎಂದರು.  

ಜೀವನದಲ್ಲಿ ಎದುರಾಗುವ ಹಂತಗಳನ್ನು ಹಂತ ಹಂತವಾಗಿ ಅನುಸರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮ್ಯಾಗೇರಿ ಅವರು ಅತ್ಯಂತ ವೇಗವಾಗಿ ಸಾಗುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದ ಬೊಮ್ಮಾಯಿ, ನಮ್ಮ ಕೆಲಸಗಳೇ ಮಾತನಾಡಬೇಕು. ನಾವು ಮಾತನಾಡದಿದ್ದರೂ ಕಾಲ ಕೂಡಿ ಬಂದಾಗ ಎಲ್ಲ ವಿಚಾರಗಳು ಹೊರಬರುತ್ತವೆ. ಸತ್ಯಕ್ಕೆ ಜಯವಿದೆ, ಸುಳ್ಳಿಗೆ ಜಯವಿಲ್ಲ. ಆ ದಿನಗಳಿಗಾಗಿ ಕಾಯಬೇಕು ಎಂದು ಹೇಳಿದರು.  

ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ, ಎಲ್ಲರ ಸಹಾಯ-ಸಹಕಾರದಿಂದ ಕಳೆದ 25 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ತಮ್ಮ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ​‍್ಿಸಿದರು.  ಕಾರ್ಯಕ್ರಮಕ್ಕೆ ಸಂಗನಬಸವ ಮಹಾಸ್ವಾಮಿಗಳು ಹಾಗೂ ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.  

ಮಾಜಿ ಕುಂದಗೋಳ ಶಾಸಕ ಎಸ್‌.ಐ. ಚಿಕ್ಕನಗೌಡ್ರ, ಯುವ ಮುಖಂಡ ಭರತ್ ಬೊಮ್ಮಾಯಿ, ನರಹರಿ ಕಟ್ಟೆ, ಅರ್ಜುನ ಹಂಚಿನಮನಿ, ಸುರೇಶ ಕಮ್ಮಾರ, ಕರಿಯಪ್ಪ ಕಟ್ಟಿಮನಿ, ಮಲ್ಲೇಶಪ್ಪ ಹರಿಜನ, ಪ್ರಕಾಶ ದಾಸನೂರ, ಎಂ.ಎಸ್‌. ಪಾಟೀಲ, ವಿರೇಶ ಸೊಬರದ, ಮಂಜುನಾಥ ಕಾರಡಗಿ, ಶಿವಾನಂದ ಸೊಬರದ, ಹನುಮಂತಪ್ಪ ಮಾದರ, ಶರೀಫ್ ನದಾಫ್ ಸೇರಿದಂತೆ ಕವಿಗೋಷ್ಠಿ ಅಧ್ಯಕ್ಷೆ ಭಾರತಿ ಛಬ್ಬಿ, ಕವಿಗಳು, ಸಾಹಿತಿಗಳು, ವಿವಿಧ ಸಮಾಜಗಳ ಅಧ್ಯಕ್ಷರು ಹಾಗೂ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.  ಸಾಹಿತಿ ಮಲ್ಲಿಕಾರ್ಜುನ ಹಡಪದ ಕಾರ್ಯಕ್ರಮ ನಿರ್ವಹಿಸಿದರು.