ನಗರಸಭೆ ಆಡಳಿತದ ವಿರುದ್ಧ ಗಂಭೀರ ಆರೋಪ

ನಗರಸಭೆ ಆಡಳಿತದ ವಿರುದ್ಧ ಗಂಭೀರ ಆರೋಪ Serious allegations against the City Municipal Council administration.

ಲೋಕದರ್ಶನ ವರದಿ 


ದಾಂಡೇಲಿ 02:  ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಸಾರ್ವಜನಿಕರಿಂದ ಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಆಡಳಿತದ ಕಾರ್ಯವೈಖರಿ ಪ್ರಶ್ನಾರ್ಹವಾಗಿದೆ.  

ನಗರಸಭೆಯ ಸರ್ಕಾರಿ ಭೂಮಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ, ನಕಲಿ ಹಕ್ಕುಪತ್ರಗಳು ಹಾಗೂ ಅಧಿಕಾರಿಗಳ ನಕಲಿ ಸಹಿಗಳನ್ನು ಬಳಸಿ ಆಶ್ರಯ ಸಮಿತಿಯ ಗಮನಕ್ಕೆ ಬಾರದ ಫಲಾನುಭವಿಗಳ ಹೆಸರಿನಲ್ಲಿ ನಿವೇಶನ ಮಂಜೂರು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಅರ್ಹರಲ್ಲದವರಿಗೆ ಹಕ್ಕುಪತ್ರ ವಿತರಿಸಿರುವ ಬಗ್ಗೆಯೂ ದೂರುಗಳಿವೆ.  

ಲೋಕಾಯುಕ್ತ ಪರೀಶೀಲನೆಯಲ್ಲಿ 250ಕ್ಕೂ ಹೆಚ್ಚು ಅನುಮಾನಾಸ್ಪದ ಹಕ್ಕುಪತ್ರಗಳು ಪತ್ತೆಯಾಗಿವೆ ಎನ್ನಲಾಗುತ್ತಿದ್ದು, ಪ್ರತಿಯೊಂದು ದಾಖಲೆ, ಫಲಾನುಭವಿಯ ಅರ್ಹತೆ ಹಾಗೂ ಆಸ್ತಿ ವರ್ಗಾವಣೆಯನ್ನು ಕಾನೂನುಬದ್ಧವಾಗಿ ಪರೀಶೀಲಿಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.  

ಅಕ್ರಮವಾಗಿ ಹಕ್ಕುಪತ್ರ ನೀಡಿರುವುದು ಅಥವಾ ಸರ್ಕಾರಿ ಭೂಮಿಯನ್ನು ಖಾಸಗಿ ಆಸ್ತಿಯಾಗಿ ಪರಿವರ್ತಿಸಿರುವುದು ತನಿಖೆಯಲ್ಲಿ ಸಾಬೀತಾದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರಿ​‍್ವ. ದೇಶಪಾಂಡೆ ಅವರ ಕ್ಷೇತ್ರದಲ್ಲೇ ಇಂತಹ ಗಂಭೀರ ಆರೋಪಗಳು ಕೇಳಿಬರುತ್ತಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.  ನಗರಸಭೆಯಲ್ಲಿ ಆಡಳಿತದ ‘ಸರ್ಜರಿ’ ನಡೆಸಿ, ಸರ್ಕಾರಿ ಆಸ್ತಿಯ ಮೇಲಿನ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ.