ಸೆ.15 : ವಿಶ್ವವ್ಯಾಪಿ ವೀರಭದ್ರ ದೇವರ ಜಯಂತ್ಯುತ್ಸವ

ಸೆ.15 : ವಿಶ್ವವ್ಯಾಪಿ ವೀರಭದ್ರ ದೇವರ ಜಯಂತ್ಯುತ್ಸವ Sept. 15: Global Celebration of Lord Veerabhadra's Jayanti

ಲೋಕದರ್ಶನ ವರದಿ 

ಧಾರವಾಡ 09 : ಭಾರತದ ಮಣ್ಣಿನ ಕಣಗಳಲ್ಲಿ ಶಿವ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಎತ್ತಿಹಿಡಿದ  ವೀರಭದ್ರ ದೇವರದು ಘನವಾದ ವ್ಯಕ್ತಿತ್ವ. ಶಿವನ ಮಾನಸಪುತ್ರ ಹಾಗೂ ಶಿವನ ಸಾಕ್ಷಾತ್ ಅಂಶವೇ ಆಗಿರುವ  ವೀರಭದ್ರ ದೇವರು ಅವತಾರ ಹೊಂದಿದ ಭಾದ್ರಪದ ಮಾಸದ ಮೊದಲ ಮಂಗಳವಾರ (ಸ.15 ರಂದು) ವಿಶ್ವವ್ಯಾಪಿ ಎಲ್ಲೆಡೆ  ವೀರಭದ್ರ ದೇವರ ಜಯಂತ್ಯುತ್ಸವ ಆಚರಿಸಲು ನಿರ್ಧರಿಸಲಾಗಿದೆ.

ಸತ್ಯದ ನೈತಿಕ ನೆಲೆಯನ್ನು ಎತ್ತಿಹಿಡಿದು ಬದುಕಿನಲ್ಲಿರಬಹುದಾದ ಋಣಾತ್ಮಕ ಮನೋಭಾವಗಳನ್ನು ನಿವಾರಿಸಿ ಅವರಿವರೆನ್ನದೇ ಎಲ್ಲರಿಗೂ ಶಿವಸಿದ್ಧಾಂತದ ಜನಕಲ್ಯಾಣದ ಆಶಯಗಳನ್ನು ಬೋಧಿಸಿರುವ ವಿಶಾಲ ಮನಸ್ಥಿತಿಯ ವೀರಭದ್ರ ದೇವರು ಯಾವುದೋ ಒಂದು ನಿರ್ದಿಷ್ಟ ಜಾತಿಗೆ ಸೀಮಿತವಾಗದೇ ಬಹಳಷ್ಟು ಸಮುದಾಯಗಳ ಕುಲದೈವವಾಗಿ ಪೂಜೆಗೊಳ್ಳುತ್ತಿದ್ದಾರೆ.  

ವಿಶ್ವವ್ಯಾಪಿ ಆಚರಣೆ : ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀರಭದ್ರ ದೇವರ ಭಕ್ತರಿದ್ದಾರೆ. ಜೊತೆಗೆ ಸಾವಿರಾರು ಸಂಖ್ಯೆಯ ವೀರಭದ್ರ ದೇವರ ದೇವಾಲಯಗಳಿವೆ. ಇದರಂತೆ ಭಾರತದ ಹೊರಗೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಶ್ರೀವೀರಭದ್ರ ದೇವರ ಭಕ್ತಗಣ ನೆಲೆಸಿರುವುದನ್ನು ಗುರುತಿಸಲಾಗಿದೆ.

ಸೆಪ್ಟಂ.15 ರಂದು (ಮಂಗಳವಾರ) ಏಕಕಾಲಕ್ಕೆ ವಿಶ್ವವ್ಯಾಪಿ ಆಚರಣೆಯಾಗಿ ಶ್ರೀವೀರಭದ್ರ ದೇವರ ಜಯಂತ್ಯುತ್ಸವ ಆಚರಿಸುವಂತೆ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯ  ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಕಲಬುರ್ಗಿ, ವಿವಿಧ ಪದಾಧಿಕಾರಿಗಳಾದ ಪಿ.ಎಂ.ಚಿಕ್ಕಮಠ, ಗೀರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ ಇತರರು ಕರೆನೀಡಿದ್ದಾರೆ.   

ದೀಪೋತ್ಸವ : ವೀರಭದ್ರ ದೇವರ ಜಯಂತ್ಯುತ್ಸವದ ಅಂಗವಾಗಿ ಎಲ್ಲಾ ನಗರ ಮತ್ತು ಗ್ರಾಮೀಣ ಭಾಗದ ವೀರಭದ್ರ ದೇವರ ದೇವಾಲಯಗಳಲ್ಲಿ, ಮನೆಯಂಗಳದಲ್ಲಿ ಹಾಗೂ ಬಾಗಿಲ ಬಳಿ ಪ್ರಣತೆಗಳನ್ನು ಬೆಳಗಿಸಿ ಸೆಪ್ಟಂ.15 ರಂದು ಸಾಯಂಕಾಲ ಎಲ್ಲರೂ ಸಾಮೂಹಿಕವಾಗಿ ದೀಪೋತ್ಸವವನ್ನು ಆಚರಿಸಿ ಪ್ರಾರ್ಥನೆ ಸಲ್ಲಿಸುವಂತೆ ವೀರಭದ್ರ ದೇವರ ಭಕ್ತರೆಲ್ಲರಲ್ಲಿ ಪ್ರಚಾರ ಸಮಿತಿ ಮನವಿ ಮಾಡಿದೆ.