ಮನೇಗಾ ಯೋಜನೆ ಉಳಿಸಿ: ಮೇ 15ರಂದು ಗ್ರಾಮ ಪಂಚಾಯಿತಿಗಳಿಗೆ ಮುತ್ತಿಗೆ : ಗ್ರಾಮೀಣ ಕೂಲಿಕಾರರ ಸಂಘದ ಪ್ರತಿಭಟನೆಗೆ ಕರೆ

ಮನೇಗಾ ಯೋಜನೆ ಉಳಿಸಿ: ಮೇ 15ರಂದು ಗ್ರಾಮ ಪಂಚಾಯಿತಿಗಳಿಗೆ ಮುತ್ತಿಗೆ : ಗ್ರಾಮೀಣ ಕೂಲಿಕಾರರ ಸಂಘದ ಪ್ರತಿಭಟನೆಗೆ ಕರೆ  Save Manega Yojana: Siege of Gram Panchayats on May 15: Rural Workers' Association calls for protest

ಲೋಕದರ್ಶನ ವರದಿ  

ಮುಂಡಗೋಡ 15: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನೇಗಾ) ಸಮರ​‍್ಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘವು ಮೇ 15ರಂದು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಲು ಕರೆ ನೀಡಿದೆ.  ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಜಿ ರಾಮ್ ಜಿ” ಯೋಜನೆಯಿಂದ ಗ್ರಾಮೀಣ ಕೂಲಿಕಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಂಘ ಆರೋಪಿಸಿದೆ. ಎನ್‌ಎಂಎಂಎಸ್, ಎಬಿಪಿಎಸ್ ಹಾಗೂ ಈ-ಕೆವೈಸಿ ನಿಯಮಗಳಿಂದ ಅನೇಕ ಕಾರ್ಮಿಕರು ಕೆಲಸದಿಂದ ವಂಚಿತರಾಗಿದ್ದು, ಕೂಲಿ ಪಾವತಿಗೂ ವಿಳಂಬವಾಗುತ್ತಿದೆ ಎಂದು ದೂರಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಅಭಾವದಿಂದ ಕೂಲಿಕಾರರು ಊರು ತೊರೆದು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮನೇಗಾ ಯೋಜನೆಯಡಿಯಲ್ಲಿ 100 ದಿನಗಳ ಉದ್ಯೋಗ ಖಚಿತಪಡಿಸಬೇಕು, ಬಾಕಿ ಕೂಲಿಯನ್ನು ತಕ್ಷಣ ಪಾವತಿಸಬೇಕು, ತಾಂತ್ರಿಕ ನಿಯಮಗಳನ್ನು ಸರಳೀಕರಿಸಬೇಕು ಹಾಗೂ ದಿನಗೂಲಿಯನ್ನು ರೂ. 600ಕ್ಕೆ ಹೆಚ್ಚಿಸಬೇಕು ಎಂದು ಸಂಘ ಒತ್ತಾಯಿಸಿದೆ.  ಬೇಸಿಗೆ ಹಿನ್ನೆಲೆಯಲ್ಲಿ ಬೆಳಗಿನ ಅವಧಿಯಲ್ಲಿ ಕೆಲಸ ನೀಡಬೇಕು ಹಾಗೂ ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಲಾಗಿದೆ. ತಾಲೂಕು ಅಧ್ಯಕ್ಷ ಭೀಮಣ್ಣ ಹುಲಗಪ್ಪ ಭೋವಿ ಸೇರಿದಂತೆ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೂಲಿಕಾರರಿಗೆ ಮನವಿ ಮಾಡಿದ್ದಾರೆ.