ಕಲ್ಲೇಶ್ವರ ದೇವಸ್ಥಾನ ಜಮೀನು ಮಾರಾಟ: ಕ್ರಮಕ್ಕೆ ಆಗ್ರಹ

ಕಲ್ಲೇಶ್ವರ ದೇವಸ್ಥಾನ ಜಮೀನು ಮಾರಾಟ: ಕ್ರಮಕ್ಕೆ ಆಗ್ರಹ  Sale of Kalleshwara Temple Land: Demand for Action

ಲೋಕದರ್ಶನ ವರದಿ 

  ಬಳ್ಳಾರಿ, ಆ. 30: ತಾಲೂಕಿನ ರೂಪನಗೂಡಿ ಹೋಬಳಿಯ ಎತ್ತಿನಬೂದಿಹಾಳು ಗ್ರಾಮದ ಸರ್ವೆ ನಂ.55ರ 17.01 ಎಕರೆ ಜಮೀನು ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದು, ಅದನ್ನು ಅಕ್ರಮವಾಗಿ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಕೀಲ ಜೆ. ರಾಮಣ್ಣ ಹಾಗೂ ಕಲ್ಲೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕಾವಲಿ ಮಾರಣ್ಣ ಆಗ್ರಹಿಸಿದರು.  

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಜಮೀನನ್ನು ಅರ್ಚಕರ ಕುಟುಂಬದವರು ?48 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಜಮೀನಿನ ಕುರಿತು 1ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್‌. ನಂ.233/2015ರ ದಾವೆ ದಾಖಲಾಗಿದ್ದು, ಜಮೀನು ದೇವಸ್ಥಾನಕ್ಕೆ ಸೇರಿದ್ದರಿಂದ ಅರ್ಚಕರು ಅಥವಾ ಅವರ ಸಂಬಂಧಿಕರು ಮಾರಾಟ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು ಎಂದು ರಾಮಣ್ಣ ತಿಳಿಸಿದರು.  

ನ್ಯಾಯಾಲಯದ ಆದೇಶ ಹಾಗೂ ಜಮೀನಿನ ಸ್ವರೂಪ ತಿಳಿದಿದ್ದರೂ ಮಾರಾಟ ಮಾಡಲಾಗಿದೆ. ಇದರಿಂದ ದೇವಸ್ಥಾನದ ಪೂಜೆ, ಪುನಸ್ಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ತಿಪ್ಪಮ್ಮ ಮತ್ತು ಮೊದಲನೇ ಪ್ರತಿವಾದಿ ವಿರುದ್ಧ ಓ.ಎಸ್‌. ನಂ.348/2021ರಲ್ಲಿ ದಾವೆ ಹೂಡಿದ್ದಾರೆ ಎಂದು ಹೇಳಿದರು.  

ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಲಾಗಿದ್ದು, ವಿವಾದಿತ ಜಮೀನಿನಲ್ಲಿ ಉಳುಮೆ ನಡೆಸದಂತೆ ಖರೀದಿದಾರರಿಗೆ ಪೊಲೀಸರು ಸೂಚಿಸಿದ್ದರು. 2025ರಲ್ಲಿ ಖರೀದಿದಾರರು ದೇವಸ್ಥಾನದ ಜಮೀನಿನಿಂದ ಬರುವ ಆದಾಯವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಹಣ ಪಾವತಿಸಿಲ್ಲ ಎಂದು ಆರೋಪಿಸಿದರು.  

ಜಮೀನಿನ ಪಹಣಿ ಸೇರಿದಂತೆ ದಾಖಲೆಗಳಲ್ಲಿ ಕಲ್ಲೇಶ್ವರ ದೇವಸ್ಥಾನದ ಹೆಸರು ಇರುವುದರಿಂದ, ವಿವಾದಿತ ಜಮೀನಿನ ಕುರಿತು ಕಲಂ 145 ಸಿಆರಿ​‍್ಪಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜಮೀನಿನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ತಡೆಯಬೇಕು ಹಾಗೂ ಅಗತ್ಯವಿದ್ದಲ್ಲಿ ಪೊಲೀಸ್ ವಶಕ್ಕೆ ಪಡೆದು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ರಾಮಣ್ಣ ಒತ್ತಾಯಿಸಿದರು.  ಸುದ್ದಿಗೋಷ್ಠಿಯಲ್ಲಿ ಕಲ್ಲೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕಾವಲಿ ಮಾರಣ್ಣ, ಕಾರ್ಯದರ್ಶಿ ಕಟ್ಟೆ ಬಸಪ್ಪ ಹಾಗೂ ಸದಸ್ಯೆ ಶ್ರೀದೇವಿ ಉಪಸ್ಥಿತರಿದ್ದರು.