ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅಭಿಪ್ರಾಯ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅಭಿಪ್ರಾಯ SP Dr. Suman D. Pennekar's opinion at the World Day Against Child Labor program

ಲೋಕದರ್ಶನ ವರದಿ

ಬಳ್ಳಾರಿ 12:  ದೇಶ ಹಾಗೂ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಇಂದಿಗೂ ಬಾಲಕಾರ್ಮಿಕ ಪದ್ಧತಿ ಆಚರಣೆಯಲ್ಲಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಜಿಲ್ಲಾ ವಕೀಲರ ಸಂಘ, ವಿವಿಧ ಇಲಾಖೆಗಳು ಮತ್ತು ಇತರೆ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಮಕ್ಕಳ ಕಾರ್ಮಿಕತೆಗೆ ರೆಡ್ ಕಾರ್ಡ್‌ ತೋರಿಸಿ, ಮಕ್ಕಳಿಗೆ ನ್ಯಾಯಯುತ ರಬಾಲ್ಯ, ವಯಸ್ಕರಿಗೆ ಘನತೆಯ ಉದ್ಯೋಗ’ ಎಂಬ ಘೋಷವಾಕ್ಯದೊಂದಿಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಏರಿ​‍್ಡಸಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಿರುವ ಕಡೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಕಂಡುಬರುತ್ತಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಆಲೋಚನೆಗಳೇ ಮುಖ್ಯ ಕಾರಣವಾಗಿದೆ. ಬಾಲಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವ ಅಗತ್ಯವಿರುವುದಿಲ್ಲ ಮತ್ತು ಅತ್ಯಂತ ಕಡಿಮೆ ವೇತನದಲ್ಲಿ ಅವರಿಂದ ಹೆಚ್ಚಿನ ಕೆಲಸ ಮಾಡಿಸಿಕೊಳ್ಳಬಹುದು ಎನ್ನುವ ಶೋಷಣೆಯ ಮನೋಭಾವನೆ ಇಂದಿಗೂ ಜೀವಂತವಾಗಿದೆ. ಇಂತಹ ಆಲೋಚನೆಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಅವರ ವಿದ್ಯಾಭ್ಯಾಸದ ಪ್ರಗತಿಯನ್ನು ಕುಂಠಿತಗೊಳಿಸುತ್ತಿವೆ ಎಂದು ತಿಳಿಸಿದರು. ಮಕ್ಕಳು ತಮ್ಮ ಬೆಳವಣಿಗೆಯ ಹಂತದಲ್ಲಿ ವಿದ್ಯಾಭ್ಯಾಸದ ಕಡೆಗೆ ಎಷ್ಟು ಗಮನ ಹರಿಸುತ್ತಾರೋ, ಅಷ್ಟೇ ಉತ್ತಮವಾಗಿ ಅವರು ದೊಡ್ಡವರಾದ ಮೇಲೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಅವರು ಸಾಧನೆ ಮಾಡುವಂತಹ ಆರಂಭಿಕ ಹಂತದಲ್ಲೇ ಅವರ ಕೈಗೆ ಪುಸ್ತಕ ನೀಡುವ ಬದಲು ಕೆಲಸಕ್ಕೆ ದೂಡಿ, ಅವರ ಭವಿಷ್ಯವನ್ನು ಮೊಟಕುಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.