ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿಗೆ ಭೇಟಿ ನೀಡಲು ಮನವಿ: ಅಶೋಕ ಮಂದಾಲಿ
ಗದಗ 13 : ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಅರ್ಜಿ ಹಾಕಿ, ಜಿಎಸ್ಟಿ ಸಮಸ್ಯೆಯಿಂದ ವಂಚಿತರಾದ ಅರ್ಹ ಫಲಾನುಭವಿಗಳು ಪರಿಹಾರ ಕಂಡುಕೊಳ್ಳಲು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿಗೆ ಭೇಟಿ ನೀಡುವಂತೆ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೃಹಲಕ್ಷ್ಮೀ ಯೋಜನೆಯಡಿ ನೊಂದಾಯಿಸಲ್ಪಟ್ಟ ತಾಲೂಕಿನ ಕೆಲವು ಫಲಾನುಭವಿಗಳು ಜಿಎಸ್ಟಿ ತಾಂತ್ರಿಕ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ. ಪತಿ ಮತ್ತು ಮಕ್ಕಳ ಕಾರಣದಿಂದ ಯಜಮಾನಿ ಫಲಾನುಭವಿ ಪಟ್ಟಿಯಿಂದ ಹೊರಗುಳಿಯುವಂತಾಗಿದೆ.
ಆದ್ದರಿಂದ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾದ ಅರ್ಹರು ತಮ್ಮ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಝರಾಕ್ಸ್ ಪ್ರತಿಯೊಂದಿಗೆ ಮುಳಗುಂದ ನಾಕಾ ಸಮೀಪ ಕೆಎಸ್ಆರ್ಟಿಸಿ ಬಸ್ ಡಿಪೋ ಎದುರಿನ ಉಪವಿಭಾಗಾಧಿಕಾರಿ(ಎಸಿ)ಕಚೇರಿ ಆವರಣದಲ್ಲಿನ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅಶೋಕ ಮಂದಾಲಿ ಅವರು ತಿಳಿಸಿದ್ದಾರೆ.