90 ದಿನ ನೀರು ಹರಿಸಿದರೆ ಉಪ ಕಾಲುವೆಗಳ ರೈತರಿಗೆ ಅನುಕೂಲ: ಶಾಸಕ ಜೆ.ಎನ್‌. ಗಣೇಶ್

90 ದಿನ ನೀರು ಹರಿಸಿದರೆ ಉಪ ಕಾಲುವೆಗಳ ರೈತರಿಗೆ ಅನುಕೂಲ: ಶಾಸಕ ಜೆ.ಎನ್‌. ಗಣೇಶ್  Releasing water for 90 days will benefit farmers served by sub-canals: MLA J.N. Ganesh

ಲೋಕದರ್ಶನ ವರದಿ 

ಕಂಪ್ಲಿ, ಆ.22: ತುಂಗಭದ್ರ ಜಲಾಶಯದ ಬಲದಂಡೆಯ ಎಲ್‌ಎಲ್ಸಿ ಕಾಲುವೆಗೆ ಆಂಧ್ರ​‍್ರದೇಶ ಮತ್ತು ಕರ್ನಾಟಕದ ಕೋಟಾ ಅನ್ವಯ ನೀರು ಹರಿಸಿದರೆ ಉಪ ಕಾಲುವೆಗಳ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್‌. ಗಣೇಶ್ ಹೇಳಿದರು.  

ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ತುಂಗಭದ್ರ ಜಲಾಶಯದ ಬಲದಂಡೆಯ ಎಲ್‌ಎಲ್ಸಿ ಕಾಲುವೆಗೆ ನೀರು ಹರಿಸಿ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು.

ಅದರಂತೆ ಆಂಧ್ರ​‍್ರದೇಶದವರು ಆ.22ರಿಂದ 31ರವರೆಗೆ 10 ದಿನಗಳ ಕಾಲ 600 ಕ್ಯೂಸೆಕ್ ನೀರು ಪಡೆಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ 10 ದಿನಗಳ ಬದಲಿಗೆ 90 ದಿನಗಳ ಕಾಲ ಆಂಧ್ರ​‍್ರದೇಶದವರು ತಮ್ಮ ಕೋಟಾದಡಿ ನೀರು ಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.  

ಇದರಿಂದ ಕರ್ನಾಟಕದ ಭಾಗದ ರೈತರಿಗೆ ಸಂಪೂರ್ಣವಾಗಿ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗಲಿದೆ. ಈಗಾಗಲೇ ರೈತರು ಬಿತ್ತನೆ ಮಾಡಿರುವ ಬೆಳೆಗಳು ಅವಧಿ ಮುಗಿಯುವ ಹಂತದಲ್ಲಿದ್ದು, ಭತ್ತದ ನಾಟಿಗೂ ಸಮಸ್ಯೆಯಾಗಿದೆ. ಜಲಾಶಯದಲ್ಲಿ ನೀರಿದ್ದರೂ ಆಂಧ್ರ​‍್ರದೇಶದವರು ತಮ್ಮ ಕೋಟಾದಡಿ ನೀರು ಪಡೆಯದ ಹಿನ್ನೆಲೆಯಲ್ಲಿ ಕರ್ನಾಟಕದ ಕೋಟಾದ ನೀರು ಕಾಲುವೆಗಳ ಮೂಲಕ ಉಪ ಕಾಲುವೆಗಳಿಗೆ ಹರಿಯುತ್ತಿಲ್ಲ. ಇದರಿಂದ ರೈತರು ಬೆಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಎರಡೂ ರಾಜ್ಯಗಳ ಕೋಟಾದಡಿ ನೀರು ಹರಿಸಿದಾಗ ಕೆಳಮಟ್ಟದ ಉಪ ಕಾಲುವೆಗಳ ರೈತರ ಜಮೀನುಗಳಿಗೆ ನೀರು ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ ಆಂಧ್ರ​‍್ರದೇಶದವರು ಸತತ 90 ದಿನಗಳ ಕಾಲ ನೀರು ಪಡೆಯುವ ನಿರ್ಧಾರಕ್ಕೆ ಬರಬೇಕು ಎಂದು ಶಾಸಕ ಗಣೇಶ್ ಒತ್ತಾಯಿಸಿದರು.