ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ: ಸುನೀಲ್ ಹೆಗಡೆ

ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ: ಸುನೀಲ್ ಹೆಗಡೆ  Reject the Kasturirangan Report: Sunil Hegde


ಕಾರವಾರ, ಸೆ. 2: ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ, ಅರಣ್ಯ ಹಾಗೂ ಜನವಸತಿ ಪ್ರದೇಶಗಳ ಕುರಿತು ಸಮಗ್ರ ಮರುಸರ್ವೆ ನಡೆಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು.  

ಕಾರವಾರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಅಗತ್ಯ. ಆದರೆ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರ ಬದುಕಿಗೆ ತೊಂದರೆ ಉಂಟುಮಾಡಬಾರದು ಎಂದರು.  

ಅರಣ್ಯ ಪ್ರದೇಶಗಳಲ್ಲಿರುವ ಜನರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು, ಶಾಲೆ, ಅಂಗನವಾಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಜೋಯಿಡಾ ತಾಲ್ಲೂಕಿನ ಕೆಲ ಗ್ರಾಮಗಳ ಜನರನ್ನು ಪರಿಹಾರ ನೀಡಿ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದ್ದು, ಮತ್ತೊಂದೆಡೆ ಗ್ರಾಮಗಳ ಅಭಿವೃದ್ಧಿಗೆ ಹಲವು ನಿರ್ಬಂಧಗಳಿವೆ ಎಂದು ಹೇಳಿದರು.  

ಜೋಯಿಡಾ ತಾಲ್ಲೂಕಿನ 111 ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ 188 ತಾಲ್ಲೂಕುಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುತ್ತವೆ. ವರದಿಯು ವಾಸ್ತವ ಕ್ಷೇತ್ರ ಸಮೀಕ್ಷೆಗಿಂತ ಅಂಕಿ-ಅಂಶಗಳ ಆಧಾರದಲ್ಲಿ ಸಿದ್ಧವಾಗಿರುವುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.  

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಅಗತ್ಯವಿದ್ದರೆ ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸುನೀಲ್ ಹೆಗಡೆ ಎಚ್ಚರಿಸಿದರು.  

ಸುದ್ದಿಗೋಷ್ಠಿಯಲ್ಲಿ ಶಿವಾಜಿ ಗೋಸಾವಿ, ಅರುಣ ಕೊಮ್ರೇಕರ್, ಸಂತೋಷ ಸಾವಂತ, ಗೀರೀಶ್ ಗೋಸಾವಿ, ಸಿದ್ದು ಜೋಕೆರಿ, ಸಂತೋಷ ವೆಳಿಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.