ರಂಗಾಯಣದ ಹೊಸ ಪ್ರಯೋಗ ಪರಿಣಾಮಕಾರಿ ಆಗಿದೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ರಂಗಾಯಣದ ಹೊಸ ಪ್ರಯೋಗ ಪರಿಣಾಮಕಾರಿ ಆಗಿದೆ: ಜಿಲ್ಲಾಧಿಕಾರಿ ದಿವ್ಯ ಪ್ರಭು Rangayana's new experiment is effective: DC Divya Prabhu

ಬಸವಣ್ಣನ ಕ್ರಾಂತಿಕಾರಿ ವಿಚಾರಗಳ ತಲೆದಂಡ ನಾಟಕ ಬಂಧಿಗಳ ಮನ ಪರಿವರ್ತನೆಗೆ ಉತ್ತಮ ಪ್ರಯೋಗ

ಧಾರವಾಡ 14: ಮನಸ್ಸು ಮತ್ತು ದೇಹದ ಚಲನೆಯಲ್ಲಿ ಏಕತೆ, ಸಾಮ್ಯತೆ ಇದ್ದಾಗ ಮಾತ್ರ ತಪ್ಪಿನ ಅರಿವಿನಿಂದ ಮನಪರಿವರ್ತನೆ ಆಗಲು ಸಾಧ್ಯವಾಗುತ್ತದೆ ಎಂದು ಅವಧಿ ಪೂರ್ವ ಬಂಧಿ ಬಿಡುಗಡೆ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಇಂದು (ಆ.14) ಸಂಜೆ ಧಾರವಾಡ ಕೇಂದ್ರ ಕಾರಾಗೃದಲ್ಲಿ ಬಂಧಿಗಳೆ ಅಭಿನಯಿಸಿದ್ದ ತಲೆದಂಡ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ, ವೀಕ್ಷಿಸಿ ಮಾತನಾಡಿದರು. 

ಬಂಧಿಗಳ ಮನಪರಿವರ್ತನೆಗಾಗಿ ಜೈಲು ನಿಯಮಾವಳಿಗಳ ಪ್ರಕಾರ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ ಎಂದರು. 

ಬಂಧಿಗಳಿಗೆ ತಮ್ಮ ತಪ್ಪಿನ ಅರಿವು ಮೂಡಿ, ಜೀವನದಲ್ಲಿ ತಪ್ಪುಗಳು ಮರುಕಳಿಸದಂತೆ ಅವರು ಎಚ್ಚರವಹಿಸಬೇಕು. ಬಿಡುಗಡೆಯ ನಂತರದ ಬದುಕಿಗಾಗಿ ಓದು, ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು. 

ಈಗಾಗಲೇ ಕಾರಾಗೃಹದ ಸುಮಾರು 100 ಕ್ಕೂ ಹೆಚ್ಚು ಮಹಿಳಾ ಖೈದಿಗಳು ಹಾಗೂ ವಿಚಾರಣಾದೀನ ಖೈದಿಗಳಿಗೆ ಕಸೂತಿ, ಟೇಲರಿಂಗ್ ಸೇರಿದಂತೆ ಸ್ವಉದ್ಯೋಗ ಆಧಾರಿತ ತರಬೇತಿಗಳನ್ನು ನೀಡಲಾಗಿದೆ. ಬಿಡುಗಡೆ ನಂತರದ ಬದುಕು ಉತ್ತಮವಾಗಿ ಅವರು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. 

ಮನ ಪರಿವರ್ತನೆಗಾಗಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಕಾರಾಗೃಹದಲ್ಲಿ ಉತ್ತಮ ಗ್ರಂಥಾಲಯವಿದೆ. ಅನೇಕ ಗ್ರಂಥಗಳಿವೆ. ಉಪಯೋಗಿಸಿಕೊಳ್ಳಬೇಕು ಎಂದರು. 

ನಮ್ಮ ಬಗ್ಗೆ ಅರಿವು ಇದ್ದಾಗ ಆಂತರಿಕ ಬಂಧನ ನಮಗೆ ಸಾಧ್ಯವಾಗುತ್ತದೆ. ಆದರೆ ಅದರ ಅರಿವು ಇಲ್ಲದಿದ್ದಾಗ ಬಾಹ್ಯ ಬಂಧನ ಆಗುತ್ತದೆ. ತಿಳಿದೊ, ತಿಳಿಯದೊ ಮಾಡಿದ ತಪ್ಪಿಗೆ ಶಿಕ್ಷೆ ಆಗುತ್ತದೆ. ಶಿಕ್ಷಾ ಅವಧಿಯಲ್ಲಿ ನಮ್ಮ ಬಗ್ಗೆ ನಾವು ಚಿಂತನೆ ಮಾಡಿಕೊಳ್ಳಬೇಕು. ತಪ್ಪಿನ ಅರಿವಾಗಿ, ಸುಧಾರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಲೆದಂಡ ನಾಟಕ ಅನೇಕ ನೀತಿ ಪಾಠಗಳನ್ನು ಕಲಿಸುತ್ತದೆ ಎಂದು ಅವರು ತಿಳಿಸಿದರು. 

ಜೈಲು ಬಂಧಿಗಳ ಮನಸ್ಸು ಪರಿವರ್ತನೆಗಾಗಿ ರಂಗಾಯಣ ಉತ್ತಮ ನಾಟಕವನ್ನು ಆಯ್ಕೆ ಮಾಡಿ ಕಲಿಸಿದೆ. ಇಲ್ಲಿನ ಪಾತ್ರದಾರಿಗಳು ತಮ್ಮ ನಿಜ ಜೀವನದಲ್ಲಿ ಈ ತಲೆದಂಡ ನಾಟಕದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ತಲೆದಂಡ ನಾಟಕದಲ್ಲಿ ಪಾತ್ರದಾರಿಗಳಾಗಿರುವ 20 ಕ್ಕೂ ಹೆಚ್ಚು ಖೈದಿಗಳು ಅದ್ಭುತವಾಗಿ ನಟನೆ ಮಾಡಿದ್ದಾರೆ. ಪಾತ್ರಗಳಲ್ಲಿ ತಮ್ಮನ್ನು ತಾವು ಅರ​‍್ಿಸಿಕೊಂಡಿದ್ದಾರೆ. ಈ ನಾಟಕ ಪ್ರಯೋಗದಿಂದ ಪಾತ್ರದಾರಿಗಳಲ್ಲಿ ಮತ್ತು ಪ್ರೇಕ್ಷಕ ಬಂಧಿಗಳಲ್ಲಿ ಸಾಕಷ್ಟು ಬದಲಾವಣೆ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು. 

ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಪ್ರೊ.ವೀರಣ್ಣ ರಾಜೂರ ಅವರು ಕಲಾ ತರಬೇತಿ ಶಿಬಿರದ ಸಮಾರೋಪ ನುಡಿಗಳನ್ನಾಡಿದರು. 

ಸಾಧನಾ ಸಂಸ್ಥೆಯ ಸಂಸ್ಥಾಪಕಿ ಇಸಾಬೆಲಾ ಝೇವಿಯರ್ ಅವರು ತಲೆ ದಂಡ ನಾಟಕ ಸಿದ್ದತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾರಾಗೃಹ ಬಂಧಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಿರುವುದು ಧಾರವಾಡ ರಂಗಾಯಣದ ಹೊಸ ಪ್ರಯೋಗ. ರಂಗಭೂಮಿಯ ಕಲೆ, ನಟನೆಗಳು ಮನ ಪರಿವರ್ತನೆಯಲ್ಲಿ  ಮುಖ್ಯ ಪಾತ್ರ ನಿರ್ವಹಿಸುತ್ತವೆ. ಇದು ಪರಿಣಾಮಕಾರಿಯಾಗಿದೆ ಎಂದು ಹೇಳಿದರು. 

ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಮಾತನಾಡಿದರು. ಪ್ರಿಜನ್ ಮಿನಿಸ್ಟರಿ ಸದಸ್ಯೆ ಸ್ಯಾಲಿ ಡಿಸೋಜಾ, ಸಹಾಯಕ ಜೈಲು ಅಧೀಕ್ಷಕಿ ಬಿ.ಆರ್‌. ನಿರ್ಮಲಾ ವೇದಿಕೆಯಲ್ಲಿದ್ದರು. 

ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಶಿಕ್ಷಕ ಪಿ.ಬಿ.ಕುರಬೇಟ್ ವಂದಿಸಿದರು. ವೈಶಾಲಿ ನಾಯಕ ಕಾರ್ಯಕ್ರಮ ನಿರೂಪಿಸಿದರು. 

ಕೇಂದ್ರ ಕಾರಾಗೃಹದ ತಿಂಗಳ ರಂಗ ತರಬೇತಿ ಶಿಬಿರವನ್ನು ಕಲ್ಲಪ್ಪ ಪೂಜಾರಿ, ಹರೀಶ ಜಿಂಕೆ ನಿರ್ದೇಶಿಸಿ, ಯಶಸ್ವಿಗೊಳಿಸಿದರು. 

ಮನೋಜ್ಞವಾಗಿ ತಲೆದಂಡ ನಾಟಕ ಅಭಿನಯಿಸಿದ ಜೈಲು ಹಕ್ಕಿಗಳು: ಧಾರವಾಡ ರಂಗಾಯಣ ಕಳೆದ ಒಂದು ತಿಂಗಳಿಂದ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಿದ್ದ ರಂಗ ತರಬೇತಿಯಲ್ಲಿ ಮೂಡಿ ಬಂದ ಗೀರೀಶ ಕಾರ್ನಾಡ ಅವರ ರಚಿಸಿದ್ದ ಪ್ರಸಿದ್ದ ತಲೆದಂಡ ನಾಟಕವನ್ನು ಜೈಲು ಬಂಧಿಗಳು ಹಾಸ್ಯ ಕಲಾವಿದ, ಧಾರವಾಡ ರಂಗಶಯಣ ನಿರ್ದೆಶಕ ರಾಜು ತಾಳಿಕೋಟಿ ಅವರ ನಿರ್ದೇಶನದಲ್ಲಿ ಇಂದು ಅತ್ಯಂತ ಮನೋಜ್ಞವಾಗಿ, ಮನಮುಟ್ಟುವಂತೆ ಅಭಿನಯಿಸಿದರು. 

ಜೈಲಿನ 20 ಕ್ಕೂ ಹೆಚ್ಚು ಬಂಧಿಗಳು ಹಾಗೂ ರಂಗಾಯಣದ ನಾಲ್ವರು ಮಹಿಳಾ ಕಲಾವಿಧರು ಸೇರಿ ತಲೆದಂಡ ನಾಟಕವನ್ನು  ಉತ್ತಮವಾಗಿ ನಟಿಸಿದರು. ನಾಟಕ ಪ್ರದರ್ಶನದ ಒಂದುವರೆ ಗಂಟೆ ಅವಧಿ ಬಂಧಿಗಳ ಸೀಳ್ಳೆ, ಕೇಕೆ, ಕೂಗುಗಳಿಂದ  ತುಂಬಿತ್ತು. ಪ್ರತಿ ಖೈದಿ ನಾಟಕ ವೀಕ್ಷಣೆಯಲ್ಲಿ ತಮ್ಮನ್ನು ಮಗ್ನರಾಗಿಸಿಕೊಂಡಿದ್ದರು. 

ಇದೊಂದು ಧಾರವಾಡ ರಂಗಾಯಣ ಮತ್ತು ಸಾಧನಾ ಸಂಸ್ಥೆಯ ಜಂಟಿ ಸುಧಾರಣಾ ಕಾರ್ಯಕ್ರಮವಾಗಿತ್ತು. 

ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರು ಕೊನೆಯವರೆಗೂ ತಲೆದಂಡ ನಾಟಕವನ್ನು ತನ್ಮಯದಿಂದ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.